ಮಂಡ್ಯ: ಸರ್ಕಾರದ ಪಟ್ಟಿಯಲ್ಲಿ ಇಲ್ಲದ ಯೋಜನೆಯೊಂದನ್ನೂ ರೂಪಿಸಿ ಅಕ್ರಮವಾಗಿ 400ಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂಪಾಯಿ ನಷ್ಟ ಮಾಡಿದ ಪ್ರಕರಣವು ಎಂಟು ವರ್ಷಗಳ ನಂತರ ಬೆಳಕಿಗೆ ಬಂದಿದೆ.
ನಿಮ್ಮ ಆಯ್ಕೆ ಎಂಬ ಯೋಜನೆಯ ಹೆಸರಿನಲ್ಲಿ 2005 ರಿಂದ 2007ರ ನಡುವೆ ಈ ನಿವೇಶನಗಳನ್ನು ಅರ್ಜಿದಾರರಿಗೆ ದಯಪಾಲಿಸಲಾಗಿದೆ. ಹರಾಜಿನ ಮೂಲಕವೇ ಮಾರಾಟ ಮಾಡಬೇಕು ಹಾಗೂ ನೇರವಾಗಿ ಕ್ರಯಪತ್ರ ಮಾಡಬಾರದು ಎಂಬ ನಿಯಮಗಳನ್ನು ಉಲ್ಲಂಘಿಸಲಾಗಿದೆ.
ಈ ವಿಷಯವನ್ನು ಖಚಿತ ಪಡಿಸಿದ ಮುಡಾ ಆಯುಕ್ತ ಕೆ. ಮಥಾಯ್ ಅವರು, ಈ ನಿವೇಶನ ಮಂಜೂರಾತಿ ಮಾಡಿರುವ 16 ಮಂದಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮಾರ್ಚ್ 18 ರಂದು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಬಯಲಿಗೆ ಬಂದದ್ದು ಹೇಗೆ: ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಫೈಲ್ ಒಂದನ್ನು ಪರಿಶೀಲನೆ ನಡೆಸಿದಾಗ ನಿಮ್ಮ ಆಯ್ಕೆ ಯೋಜನೆಯಲ್ಲಿ ನಿವೇಶನ ನೀಡಿರುವುದು ಗಮನಕ್ಕೆ ಬಂದಿತ್ತು. ಅಂತಹ ಯೋಜನೆ ಇತ್ತೇ ಎಂಬುದನ್ನು ಪರಿಶೀಲಿಸಿದಾಗ, ಅಂತಹ ಯೋಜನೆಯ ಇಲ್ಲದ್ದು ಬೆಳಕಿಗೆ ಬಂದಿದೆ.
ಆಗ ಕಡತಗಳನ್ನು ತಡಕಾಡಿದಾಗ 336 ನಿವೇಶನಗಳನ್ನು ಈ ಯೋಜನೆಯಲ್ಲಿ ನೀಡಿರುವುದು ಬೆಳಕಿಗೆ ಬಂದಿದ್ದು, ಕೆಲವು ಆಯುಕ್ತರು ಹಿಂದೆ ಬರೆದಿರುವ ಕಡತಗಳಲ್ಲಿ 400 ಎಂದು ನಮೂದಿಸಿದ್ದಾರೆ. ಪರಿಶೀಲನೆ ಕಾರ್ಯ ನಡೆದಿದ್ದು, ಪೂರ್ಣಗೊಂಡ ನಂತರವಷ್ಟೇ ಖಚಿತವಾಗಿ ಎಷ್ಟು ನಿವೇಶನ ಎಂಬುದು ಗೊತ್ತಾಗಲಿದೆ ಎನ್ನುತ್ತಾರೆ ಮಥಾಯ್ ಅವರು.
2005ರ ನಂತರದ ನಿವೇಶನಗಳನ್ನು ಕಡ್ಡಾಯವಾಗಿ ಲೀಸ್ ಕಮ್ ಸೇಲ್ ಆಧಾರದ ಮೇಲೆ ನೀಡಬೇಕು ಎಂದಿದ್ದರೂ ಉಲ್ಲಂಘಿಸಿ, ನೇರವಾಗಿ ಕ್ರಯಪತ್ರಗಳನ್ನು ಮಾಡಿಕೊಡಲಾಗಿದೆ. ಹರಾಜು ಮೂಲಕ ಮಾಡಬೇಕು ಎನ್ನುವುದನ್ನು ಉಲ್ಲಂಘಿಸಿ, ಅರ್ಜಿ ಆಹ್ವಾನಿಸಿ ನಿವೇಶನ ವಿತರಣೆ ಮಾಡಲಾಗಿದೆ ಎಂದರು.
ಸಮಗ್ರ ತನಿಖೆಯಾಗಬೇಕು: ಸತ್ಯಾನಂದ ಆಗ್ರಹ
ಕಾನೂನು ಉಲ್ಲಂಘಿಸಿ ನಿಮ್ಮ ಆಯ್ಕೆ ಯೋಜನೆಯಡಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣವನ್ನೂ ಸಿಬಿಐಗೆ ಒಪ್ಪಿಸಬೇಕು ಎಂದು ವಕೀಲ ಸತ್ಯಾನಂದ ಆಗ್ರಹಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2005ರಲ್ಲಿ ಹನ್ಷಿಯಾಬಾನು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಮ್ಮ ಆಯ್ಕೆ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಆಗ ಶಾಸಕರಾದ ಎಂ.ಶ್ರೀನಿವಾಸ್, ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಎಚ್‌್.ಬಿ. ರಾಮು, ಎಂ.ಡಿ. ರಮೇಶ್‌ರಾಜು ಮತ್ತಿತರರೂ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
107 ನಿವೇಶನ ಹಂಚಿಕೆ ಹಾಗೂ 5 ಕೋಟಿ ರೂಪಾಯಿ ಠೇವಣಿ ಹಣ ದುರುಪಯೋಗ ಪ್ರಕರಗಣಳನ್ನು ಈಗಾಗಲೇ ಸಿಬಿಐ ಗೆ ವಹಿಸಲಾಗಿದೆ. ಇದನ್ನೂ ಅವರಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
400ಕ್ಕೂ ಹೆಚ್ಚು ನಿವೇಶನಗಳ ಹಂಚಿಕೆ ಮಾಡಿರುವ ಕಡತವನ್ನು ಸರ್ಕಾರದ ಗಮನಕ್ಕೆ ತಂದಿಲ್ಲ. ನಿಯಾಮವಳಿಗಳನ್ನೂ ಉಲ್ಲಂಘಿಸಲಾಗಿದೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎನ್. ಚಲುವರಾಯಸ್ವಾಮಿ ಅವರ ಗಮನಕ್ಕೆ ನಡೆದಿರಲು ಸಾಧ್ಯವಿಲ್ಲ. ಕೇವಲ 100 ರೂಪಾಯಿ ಚದುರ ಅಡಿಯಂತೆ 400ಕ್ಕೂ ಹೆಚ್ಚು ನಿವೇಶನಗಳನ್ನು ತರಾತುರಿಯಲ್ಲಿ ಕ್ರಯ ಮಾಡಿಕೊಟ್ಟಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಿಮ್ಮ ಆಯ್ಕೆ ಯೋಜನೆಯ ಹೆಸರಿನಲ್ಲಿ ಕೇವಲ 109 ನಿವೇಶನಗಳಿವೆ ಎಂದು ತಿಳಿಸಲಾಗಿರುತ್ತದೆ. ಆದರೆ, ನಂತರ 400ಕ್ಕೂ ಹೆಚ್ಚು ನಿವೇಶನ ಹಂಚಿಕೆ ಮಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ದೊರಕಬೇಕಿದೆ ಎಂದರು.
ನರಸಪ್ಪ ಹೆಗಡೆ, ಸಂಪತ್‌ಕುಮಾರ್, ಗುರುಪ್ರಸಾದ್, ತಿಮ್ಮೇಗೌಡ, ಲೋಕೇಶ್, ಲಿಂಗರಾಜು ಉಪಸ್ಥಿತರಿದ್ದರು.
ವಿವೇಕಾನಂದ ಬಡಾವಣೆಯ ಇತಿಹಾಸ
ಮಂಡ್ಯದ ಹೊರವಲಯದಲ್ಲಿರುವ ಚಿಕ್ಕಮಂಡ್ಯ ಕೆರೆಯು ಕಾಲಾಂತರದಲ್ಲಿ ವಿವೇಕಾನಂದ ನಗರ ಬಡಾವಣೆಯಾಗಿ ಪರಿವರ್ತನೆಗೊಂಡಿದೆ.
1995ರಿಂದ ಕೆರೆಯನ್ನು ನಿವೇಶನವಾಗಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆಗ ಎಸ್.ಡಿ. ಜಯರಾಂ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 1998ರಲ್ಲಿ ನಿವೇಶನವಾಗಿ ಪರಿವರ್ತಿಸಲಾಗಿದೆ. ಒಟ್ಟು 400ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮುಡಾಕ್ಕೆ 230 ಎಕರೆ ಪ್ರದೇಶ ನೀಡಲಾಗಿತ್ತು. ಉಳಿದಂತೆ ಕರ್ನಾಟಕ ಗೃಹ ಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿಗಳಿಗೆ ನೀಡಲಾಗಿದೆ.
2002ರ ವೇಳೆಗೆ 2744 ನಿವೇಶನಗಳನ್ನು ರಚಿಸಲಾಗಿತ್ತು. ಅದರಲ್ಲಿ ಮೂಲೆ ನಿವೇಶನಗಳೆಂದು 360 ಗುರುತಿಸಿದ್ದರೆ, ಸಾರ್ವಜನಿಕರ ವಿತರಣೆಗೆಂದು 2,354 ನಿವೇಶನ ಮೀಸಲಿಡಲಾಗಿತ್ತು. ಉಳಿದದ್ದನ್ನು ಸಾರ್ವಜನಿಕ ಬಳಕೆಗೆ ಬಳಸಿಕೊಳ್ಳಲಾಗಿದೆ.
2002ರಲ್ಲಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿ ಲಾಟರಿ ಮೂಲಕ 2,051 ನಿವೇಶನಗಳನ್ನು ವಿತರಿಸಲಾಗಿತ್ತು. 303 ನಿವೇಶನಗಳು ಉಳಿದಿದ್ದವು. ಲಾಟರಿ ಮೂಲಕ ವಿತರಣೆ ಮಾಡಲಾಗಿದ್ದ ನಿವೇಶನಗಳಲ್ಲಿ ಹಣ ಪಾವತಿಸಲಿಲ್ಲ ಎಂಬ ಕಾರಣಕ್ಕೆ 812 ಮರಳಿ ಮುಡಾಕ್ಕೆ ಬಂದಿದ್ದವು.
ಈ ನಿವೇಶನಗಳ ಮೇಲೆ ಕಣ್ಣಿಟ್ಟಿದ್ದ ಮುಡಾ ಅಧ್ಯಕ್ಷರು ಹಾಗೂ ಸದಸ್ಯರು, 2005 ರಿಂದ 2007ರ ವರೆಗಿನ ಅವಧಿಯಲ್ಲಿ ಮುಡಾ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂಬ ಕಾರಣವೊಡ್ಡಿ ನಿವೇಶನಗಳ ಹಂಚಿಕೆ ಮಾಡಿದ್ದಾರೆ.
2009ರಲ್ಲಿ ಇದೇ ರೀತಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆಗೆ ಮುನ್ನವೇ 107 ಮಂದಿಗೆ ನಿವೇಶನ ಹಂಚಿಕೆ ಮಾಡುವ ಮೂಲಕ ವಿವಾದ ಹುಟ್ಟು ಹಾಕಲಾಗಿತ್ತು. ಆ ಪ್ರಕರಣದ ತನಿಖೆಯೂ ನಡೆಯುತ್ತಿದೆ.
ನಿವೇಶನ ಪಡೆದವರು ಯಾರು?
ಕಾನೂನು ಉಲ್ಲಂಘಿಸಿ ನಿವೇಶನ ಪಡೆದವರಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಅವರ ಸಂಬಂಧಿಕರೂ ಇದ್ದಾರೆಯೇ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.
ಈ ಹಿಂದೆ ಅಕ್ರಮವಾರ ಪಡೆದ ಆರೋಪ ಎದುರಿಸುತ್ತಿರುವ 107 ನಿವೇಶನ ಪಟ್ಟಿಯಲ್ಲಿ ಆಗಿನ ಮೂವರು ಶಾಸಕರಿದ್ದರು. ಈಗಿರುವ ಪಟ್ಟಿಯಲ್ಲಿ ಯಾರಿದ್ದಾರೆ ಎಂಬುದು ಒಂದೆರಡು ದಿನಗಳಲ್ಲಿ ಬಹಿರಂಗವಾಗಲಿದೆ.
ಲೋಕಸಭೆ ಚುನಾವಣೆ ಕಾವು ಏರುತ್ತಿರುವುದರಿಂದ ಜನಪ್ರತಿನಿಧಿಗಳು ಅಥವಾ ಅವರ ಸಂಬಂಧಿಗಳ ಹೆಸರಿದ್ದರೆ, ಅಂತಹವರಿಗೆ ಮುಜುಗುರವಾಗುವುದಂತೂ ಗ್ಯಾರಂಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.