ADVERTISEMENT

ಮುದ್ದೆ ನುಂಗಿ ಬಹುಮಾನ ಗೆದ್ದರು!

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:38 IST
Last Updated 2 ಡಿಸೆಂಬರ್ 2013, 8:38 IST

ಮಂಡ್ಯ: ಊಟಕ್ಕೆ ರಾಗಿ ಮುದ್ದೆ, ನಾಟಿ ಕೋಳಿ ಸಾರು ಇದ್ದರೆ ಹೇಗೆ?
‘ಬಾಯಲ್ಲಿ ನೀರೂರಿಸುತ್ತದೆ, ಎರಡರದೂ ಸೂಪರ್‌ ಕಾಂಬಿನೇಷನ್‌’ ಎನ್ನುವುದು ಈ ಊಟವನ್ನು ಸವಿದವರ ಮಾತು. ಸ್ಪರ್ಧೆಯಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ಇದ್ದರೆ ಹೇಗೆ? ಹಣ ಕೊಂಡೋಂಗಿಲ್ಲ, ಗೆಲ್ಲದಿದ್ದರೂ ಸರಿಯೇ, ಒಮ್ಮೆ ಬಾಯಿ ಚಪ್ಪರಿಸಿಬಿಡೋಣ ಎಂದು ಜನ (ಮಾಂಸಹಾರಿಗಳು) ಮುಗಿ ಬೀಳುತ್ತಾರೆ.

ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ಆಗಿದ್ದು, ಅದೇ. ‘ರಾಗಿ ಮುದ್ದೆ’ ನುಂಗುವ ಸ್ಪರ್ಧೆಯಲ್ಲಿ ಜನ ನಿರೀಕ್ಷೆಗೂ ಮೀರಿ ಭಾಗವಹಿಸಿದ್ದರು. ಗರಿಷ್ಠ ಪ್ರಮಾಣದಲ್ಲಿ ಪಟಪಟನೆ ಮುದ್ದೆಯನ್ನು ಗಂಟಲಿ ಗಿಳಿಸಿದ ಮೂರು ಮಂದಿ ಭೂಪರು ನಗದು ಬಹುಮಾನ ಪಡೆದು ಸಂಭ್ರಮಿಸಿದರೆ, ಉಳಿದವರು ಊಟ ಮಾಡಿ ಖುಷಿಪಟ್ಟರು !

ಮುದ್ದೆಯನ್ನು ಗಂಟಲಿಗಿಳಿಸುವಾಗ ಬಾಯಲ್ಲಿ ಸಿಕ್ಕಿಕೊಂಡು, ಹಲ್ಲಿನ ನಡುವೆ ಅಂಟಿಕೊಂಡರೂ ನಡುನಡುವೆ ನೀರು ಬಿಟ್ಟು, ಉದರಕ್ಕೆ ಇಳಿಸುತ್ತಿದ್ದರು. ಕೆಲವರೂ ದಕ್ಕಿಸಿಕೊಳ್ಳಲಾಗದೇ ವಾಂತಿ ಮಾಡಿಕೊಂಡರು.

ಯುವಕರನಷ್ಟೇ ಅಲ್ಲದೇ ಹಿರಿಯರೂ ಪಾಲ್ಗೊಂಡು ಗಮನ ಸೆಳೆದರು. ಸ್ಪರ್ಧಿಗಳನ್ನು ಹುರಿದುಂಬಿಸಲು ಹೋ. ಹೋ.. ಐಸಾ.. ಭಲೇ ಭಲೇ..ಎನ್ನುವ ಘೊಷಣೆಗಳೂ ವೀಕ್ಷಕ ವರ್ಗದಿಂದ ತೇಲಿಬಂದವು.

2.75 ಕೆ.ಜಿ. ರಾಗಿ ಮುದ್ದೆ ನುಂಗಿ ಮೊದಲಿಗರಾದ ಸತೀಶ್‌ ಅವರು, 1001 ರೂ. ಪಡೆದರೆ, ಗಿರೀಶ್‌ ಅವರು 501 ರೂ. ಹಾಗೂ ಮಲ್ಲೇಶ್‌ ಅವರು 251 ರೂ. ನಗದು ಬಹುಮಾನ ಪಡೆದರು.

ಸ್ಪರ್ಧೆಗೆ ಚಾಲನೆ ನೀಡಿದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ. ಲಂಕೇಶ್‌ ಮಾತನಾಡಿ, ‘ಗ್ರಾಮೀಣ ಆಟೋಟಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ವಾಗಬೇಕು. ಇಂಥ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಜವರೇಗೌಡ, ಉಮೇಶ್‌, ಚಿಕ್ಕೀರೇಗೌಡ, ಉಜ್ಜಿನಿಗೌಡ, ಕುಮಾರ್‌ಗೌಡ, ಪ್ರಭು, ಮಹದೇವ, ಅಂಗಡಿ ಮಧು, ಮಹೇಶ್‌, ವಿನೇಶ್‌, ನಿತ್ಯ ಲೋಹಿತ್ ಸೇರಿದಂತೆ ಹಲವರು ಸ್ಪರ್ಧೆಯನ್ನು ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.