ADVERTISEMENT

ಮೂಲಸೌಕರ್ಯ ಕಾಣದ ಚಿಕ್ಕಮುಲಗೂಡು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 6:50 IST
Last Updated 1 ಮಾರ್ಚ್ 2012, 6:50 IST

ಮಳವಳ್ಳಿ: ಸುವರ್ಣ ಗ್ರಾಮ ಯೋಜನೆಯಡಿ ಸಿಮೆಂಟ್ ರಸ್ತೆ ಆಗಿದ್ದರೂ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಸರ್ಕಾರಿ ಆಸ್ಪತ್ರೆ ಇದ್ದರೂ ಸ್ವಂತ ಕಟ್ಟಡವಿಲ್ಲ. ಕುಡಿಯುವ ನೀರು ಸಮರ್ಪಕ ವಾಗಿಲ್ಲ. ಮುಖ್ಯರಸ್ತೆ ಬದಿಯಲ್ಲೇ ಸಾಲು ಸಾಲು ತಿಪ್ಪೆಗುಡ್ಡೆಗಳು. ಇವು ತಾಲ್ಲೂಕಿನ ಗಡಿಗ್ರಾಮ ಚಿಕ್ಕಮುಲಗೂಡು ಗ್ರಾಮದ ಸಮಸ್ಯೆಗಳು.

ತಾಲ್ಲೂಕು ಕೇಂದ್ರದಿಂದ 18 ಕಿ.ಮೀ. ಹಾಗೂ ಜಿಲ್ಲಾ ಕೇಂದ್ರಕ್ಕೆ 15 ಕಿ.ಮೀ. ದೂರದಲ್ಲಿದೆ. ಗ್ರಾಮ ಪಂಚಾಯಿತಿ ಕೇಂದ್ರವು ಆಗಿರುವ ಈ ಗ್ರಾಮ, ತಾಲ್ಲೂಕು ಪಂಚಾಯಿತಿ ಕ್ಷೇತ್ರವೂ ಹೌದು. ಸುಮಾರು 400 ಕುಟುಂಬಗಳಿದ್ದು 1650 ಪುರುಷರು, 1550 ಮಹಿಳೆಯರು ಸೇರಿದಂತೆ ಒಟ್ಟು 3200ಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು ನಾಲ್ಕು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅಣಸಾಲೆ, ಭೀಮನಹಳ್ಳಿ, ಹಳ್ಳದಕೊಪ್ಪಲು ಗ್ರಾಮಗಳು ಸೇರಿವೆ.

ಈ ಗ್ರಾಮವು ಟಿ.ನರಸಿಪುರ ದಿಂದ ಕಿರುಗಾವಲು ಮಾರ್ಗ ಮಂಡ್ಯಕ್ಕೆ ತೆರಳುವ ಮಾರ್ಗದಲ್ಲಿದೆ. ಮುಖ್ಯ ರಸ್ತೆ ತೀರ ಹದಗೆಟ್ಟಿದ್ದು ಸಂಚಾರ ವ್ಯವಸ್ಥೆಗೆ ಸಂಚಕಾರ ಉಂಟಾಗಿದೆ. ಗ್ರಾಮದ ಒಳ ರಸ್ತೆಗಳು ಸುವರ್ಣ ಗ್ರಾಮ ಯೋಜನೆಯಡಿ ಸಿಮೆಂಟ್ ರಸ್ತೆಗಳಾಗಿ ಸಿದ್ದಗೊಂಡಿದ್ದರೂ ಚರಂಡಿ ವ್ಯವಸ್ಥೆ ಸೂಕ್ತವಾಗಿಲ್ಲ.

ಕುಡಿಯುವ ನೀರು ಸಮರ್ಪಕವಾಗಿಲ್ಲ. ಕುಡಿಯುವ ನೀರು ಪೂರೈಕೆ ಮಾಡಲು ಕಿರುನೀರು ಸರಬರಾಜು ಯೋಜನೆ ಯಡಿ ಮಿನಿಟ್ಯಾಂಕ್ ನಿರ್ಮಿಸಿದ್ದರೂ ಸಂಪರ್ಕ ಕಲ್ಪಿಸಿಲ್ಲ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಾಲಾ ಕಟ್ಟಡದಲ್ಲಿ ನಡೆಯುತ್ತಿದೆ.

ಕೆಲ ಕುಟುಂಬಗಳನ್ನು ಹೊರತುಪಡಿಸಿದರೆ ಬಹುತೇಕ ಕುಟುಂಬಗಳು ಗ್ರಾಮ ನೈರ್ಮಲ್ಯ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಂಡಿದ್ದಾರೆ.

ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಹಾಯಕ     ಎಂಜಿನಿಯರ್ ಅವರು ಪ್ರತಿಕ್ರಿಯಿಸಿ ಬರಪರಿಹಾರದ ಅನುದಾನದಲ್ಲಿ ಶೀಘ್ರವೇ ಸಂಪರ್ಕ ಕಲ್ಪಿಸಲಾಗುವುದೆಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯಡಿ 7 ಲಕ್ಷ ರೂ. ಅನುದಾನ ಬಳಸಿಕೊಳ್ಳಲಾಗಿದೆ. ಗ್ರಾಮದಲ್ಲಿ ಗೌರಿಗಣೇಶ ಹಬ್ಬದ ಸಂದರ್ಭ ದಲ್ಲಿ ದೊಡ್ಡ ದೊಡ್ಡ ಗಣೇಶಮೂರ್ತಿಗಳನ್ನು ನಿರ್ಮಿಸಿ ಮಾರಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.