ADVERTISEMENT

ಮೆಚ್ಚುಗೆ ಗಳಿಸಿದ ‘ಏಕಲವ್ಯ’

ಹಾರೋಹಳ್ಳಿ ಪ್ರಕಾಶ್‌
Published 14 ಡಿಸೆಂಬರ್ 2013, 9:10 IST
Last Updated 14 ಡಿಸೆಂಬರ್ 2013, 9:10 IST

ಪಾಂಡವಪುರ: ಯದುಗಿರಿಯ ಕವಿ ಎಂದೇ ಪ್ರಖ್ಯಾತರಾಗಿದ್ದ ಮೇಲುಕೋಟೆಯ ಪುತಿನ ಅವರ ಹೆಸರಿನಲ್ಲಿ ಪ್ರಾರಂಭಗೊಂಡಿರುವ ಡಾ.ಪುತಿನ ಟ್ರಸ್ಟ್ ಸಾಂಸ್ಕೃತಿಕ ಹಾಗೂ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಪ್ರತಿ ವರ್ಷ ಶಾಲಾ–ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಲೇಜು ರಂಗ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ.

ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಅವರನ್ನು ಕ್ರಿಯಾಗೊಳಿಸುವುದಲ್ಲದೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪ್ರಜ್ಞೆ ಬೆಳೆಸುವ ಉದ್ದೇಶವನ್ನಿಟ್ಟುಕೊಂಡಿದೆ.

ಈ ಸಾಲಿನಲ್ಲಿ ಡಾ.ಪುತಿನ ಟ್ರಸ್ಟ್ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗುಂತೆ ದ್ವಿತೀಯ ಪಿಯುಸಿ ಕನ್ನಡ ಪಠ್ಯಪುಸ್ತಕದಲ್ಲಿನ ಕವಿ ಡಾ.ಸಿದ್ದಲಿಂಗಯ್ಯನವರ ‘ಏಕಲವ್ಯ’ ನಾಟಕವನ್ನು ಆಯ್ಕೆಮಾಡಿಕೊಂಡು  ಮೇಲುಕೋಟೆಯ ಶ್ರೀಲಕ್ಷ್ಮೀ ಹಯಗ್ರೀವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.

‘ಏಕಲವ್ಯ’ ನಾಟಕ ತಮಗೆ ಪಠ್ಯಪುಸ್ತಕವಾಗಿರುವುದರಿಂದ ವಿದ್ಯಾರ್ಥಿಗಳೂ ತುಂಬಾ ಆಸಕ್ತಿಯಿಂದ ನಾಟಕದ ತಾಲೀಮು ನಡೆಸಿದರು. ಮೈಸೂರಿನ ವೀರೇಶ್, ಎಂಪಿಎಂ ಅವರು ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿದರೆ, ಜಿ.ಚಂದ್ರಪ್ರಭ ಸಹ ನಿರ್ದೇಶನ, ಜೀವನ್ ಹೆಗ್ಗೂಡು ಬೆಳಕು, ಮಂಜುನಾಥ್ ಕಾಚಕ್ಕಿ ವಸ್ತ್ರವಿನ್ಯಾಸ, ಎಂ.ಪಿ. ಸಂಪತ್ ಕುಮಾರ್ ಸಂಗೀತ ಸಾಂಗ್ಯತ ಒದಗಿಸಿಕೊಟ್ಟರು.

ಮೇಲುಕೋಟೆಯ ಪುತಿನ ಕಲಾಮಂದಿರದಲ್ಲಿ ಈಚೆಗೆ ‘ಏಕಲವ್ಯ’ ನಾಟಕ ಪ್ರದರ್ಶಿಸಿದ ಕಾಲೇಜು ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ವೃತ್ತಿ ಕಲಾವಿದರನ್ನು ಮೀರಿಸುವಂತೆ ಅಭಿನಯಿಸಿದರು. ಅವರಿಗೆ ಗೊತ್ತಿಲ್ಲದಂತೆ ಅವರೊಳಗೊಬ್ಬ ಕಲಾವಿದ ಹೊರಹೊಮ್ಮಿದ್ದ. ‘ಇವ್ನು ನಮ್ಮ ಹುಡುಗನೇ, ಇವ್ಳು ನಮ್ಮೂರು ಹುಡುಗೀನಾ,,’ ಎಂದು ಪ್ರೇಕ್ಷಕರು ನಿಬ್ಬೆರಗಾಗಿ ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಏಕಲವ್ಯನ ಪಾತ್ರದಲ್ಲಿ ಪುನಿತ್ ಕುಮಾರ್, ದ್ರೋಣ, ಯುಧೀಷ್ಟರನಾಗಿ ಟಿ.ಎನ್. ಚೈತ್ರಾ, ಕೃಷ್ಣ, ಅಬ್ಬೆಯಾಗಿ ಆರ್.ಎಸ್. ವರಲಕ್ಷ್ಮೀ, ಭೀಮ, ಭೀಷ್ಮನಾಗಿ ಲೋಹಿತ್, ದುರ್ಯೋಧನನಾಗಿ ಎಂ.ಸಿ. ಲಕ್ಷ್ಮೀ, ಅರ್ಜುನನಾಗಿ ಕೆ.ಬಿ. ರೋಹಿಣಿ, ಕರ್ಣ, ಆಶ್ವತ್ಥಾಮನಾಗಿ ಸುಹಾಸಿನಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾದರು. ಎ. ಸುಮಾ, ಬಿ.ಆರ್. ಪೂರ್ಣಿಮಾ, ಪಿ. ನಂದನ್ ಉತ್ತಮವಾಗಿ ಅಭಿನಯಿಸಿದರೆ, ನೃತ್ಯ ತಂಡದಲ್ಲಿ ಪಲ್ಲವಿ, ಗಂಗಾಧರ್, ಚಂದನ, ಸ್ನೇಹಾ, ಸುಪ್ರಿತಾ, ಯಾಮಿನಿ, ಪೃಥ್ವಿ, ಯಮುನಾ, ಮನೋಜ್ ತೇಜಸ್, ವಿ. ಕೀರ್ತನಾ ಗಮನಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.