ADVERTISEMENT

ರಸ್ತೆ, ಚರಂಡಿಯನ್ನೇ ಕಾಣದ ಊರು!

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 8:31 IST
Last Updated 25 ಅಕ್ಟೋಬರ್ 2017, 8:31 IST
ಮಾಣಿಕನಹಳ್ಳಿ ಗ್ರಾಮದಲ್ಲಿ ಒಳಚರಂಡಿ ಇಲ್ಲದ ಕಾರಣ ಮನೆಗಳ ದ್ರವ ತ್ಯಾಜ್ಯ ರಸ್ತೆ ಪಕ್ಕದಲ್ಲೇ ಹರಿಯುತ್ತಿದೆ
ಮಾಣಿಕನಹಳ್ಳಿ ಗ್ರಾಮದಲ್ಲಿ ಒಳಚರಂಡಿ ಇಲ್ಲದ ಕಾರಣ ಮನೆಗಳ ದ್ರವ ತ್ಯಾಜ್ಯ ರಸ್ತೆ ಪಕ್ಕದಲ್ಲೇ ಹರಿಯುತ್ತಿದೆ   

ಕಿಕ್ಕೇರಿ: ಸಮೀಪದ ಮಾಣಿಕನಹಳ್ಳಿ ಗ್ರಾಮಕ್ಕೆ ಕಾಲಿಟ್ಟರೆ ಸಾಕು; ಮೇಲ್ನೋಟಕ್ಕೇ ಈ ಗ್ರಾಮದ ಸ್ಥಿತಿ ಯಾರಿಗಾರದೂ ಅರ್ಥವಾಗುತ್ತದೆ. ಗ್ರಾಮದಲ್ಲಿ ಬಹುಪಾಲು ಕಡೆ ರಸ್ತೆಯೇ ಇಲ್ಲ. ಕಾಲುದಾರಿಯನ್ನೇ ರಸ್ತೆ ಮಾಡಿಕೊಂಡು ಬಳಸಲಾಗುತ್ತಿದೆ. ಇಲ್ಲಿ ಬಹುಪಾಲು ಕಡೆ ರಸ್ತೆಗಳು ಕಾಂಬರ್‌ ಮುಖವನ್ನೇ ಕಂಡಿಲ್ಲ. ಇನ್ನೊಂದೆಡೆ ಒಳಚರಂಡಿಯ ಗೋಳು.

ನಿಜ. ಗ್ರಾಮದಲ್ಲಿ ಚರಂಡಿ ಇಲ್ಲದ ಕಾರಣ ತ್ಯಾಜ್ಯವೆಲ್ಲ ಮನೆಗಳ ಮುಂದೆ– ಹಿಂದೆ ಕಟ್ಟಿಕೊಳ್ಳುತ್ತಿದೆ. ಇದರಿಂದ ಗಬ್ಬು ವಾಸನೆ ಹರಡುತ್ತಿದ್ದು, ಸೊಳ್ಳೆ, ಕ್ರಿಮಿ– ಕೀಟಗಳು ಹುಟ್ಟಿಕೊಂಡಿವೆ. ಮಕ್ಕಳು, ಹಿರಿಯರಿಗೆ ಹಲವು ರೀತಿಯ ರೋಗಗಳು ಬಾಧಿಸುತ್ತಿವೆ.

ಸಂಚಾರಕ್ಕೆ ಒಳ್ಳೆಯ ದಾರಿ ಇಲ್ಲದ್ದರಿಂದ ದೂಳು ಅಡರಿಕೊಳ್ಳುತ್ತಿದೆ. ಮಳೆ ಬಂದರಂತೂ ಇಲ್ಲಿನ ದಾರಿಗಳೆಲ್ಲ ಭತ್ತದ ಗದ್ದೆಯಂತಾಗುತ್ತವೆ. ಕೆಸರಿನ ಮಧ್ಯೆಯೇ ಓಡಾಡಬೇಕಾಗಿದೆ. ಎಲ್ಲೆಂದರಲ್ಲಿ ಜಲ್ಲಿ ಕಲ್ಲುಗಳು ಕಿತ್ತು ಬಂದಿದ್ದು, ಓಡಾಡಲು ಕಷ್ಟವಾಗುತ್ತಿದೆ. ಸಣ್ಣ ವಾಹನಗಳ ಸವಾರಿಯಂತೂ ಸರ್ಕಸ್ಸೇ ಸರಿ.

ADVERTISEMENT

‘ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಗ್ರಾಮ ಪಂಚಾಯಿತಿ ಇತ್ತ ಕಣ್ಣುಹಾಯಿಸಿಲ್ಲ. ಈ ಭಾಗದ ಜನಪ್ರತಿನಿಧಿಗಳೂ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡಿಲ್ಲ. ಈಗಲಾದರೂ ಸಂಬಂಧಿಸಿದವರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ರಸ್ತೆ, ಚರಂಡಿ ನಿರ್ಮಿಸಬೇಕು’ ಎಂದು ಗ್ರಾಮಸ್ಥ ಮಹೇಂದ್ರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.