ADVERTISEMENT

ರಾಜ್ಯದ ಉಳಿವಿಗೆ ಕಾಂಗ್ರೆಸ್ ಸರ್ಕಾರ ಬರಬೇಕು: ಸಿದ್ದು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 10:20 IST
Last Updated 15 ಅಕ್ಟೋಬರ್ 2011, 10:20 IST

ನಾಗಮಂಗಲ: ಬಿಜೆಪಿ ಮತ್ತು ಜೆಡಿಎಸ್ ಸಾಮಾಜಿಕ ನ್ಯಾಯದ ವಿರೋಧಿ ಪಕ್ಷಗಳು. ಈ ರಾಜ್ಯ ಸುಸ್ಥಿತಿಯಲ್ಲಿರ ಬೇಕಾದರೆ ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬರಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಪಟ್ಟಣದ ಎಸ್‌ಎಲ್‌ಎನ್ ಸಮುದಾಯ ಭವನದ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯವನ್ನು ಲೂಟಿ ಮಾಡಲು ಬಿಜೆಪಿ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿಯ ಎಲ್ಲ ನಾಯಕರು ಒಂದಲ್ಲ ಒಂದು ಹಗರಣಗಳಲ್ಲಿ ಭಾಗಿಯಾಗಿ ಹಣ ದೋಚಿಕೊಂಡು ಅಧಿಕಾರ ಕಳೆದುಕೊಂಡ ಎಷ್ಟೋ ನಿದರ್ಶನಗಳು ಇಂದಿಗೂ ಜೀವಂತ ವಾಗಿದೆ. ಈ ರಾಜ್ಯ ವನ್ನಾಳಿದ ಇಬ್ಬರು ಮುಖ್ಯ ಮಂತ್ರಿಗಳು ಆರೋಪ ಹೊತ್ತು ನ್ಯಾಯಾಲಯದ ಕಟಕಟೆಯಲ್ಲಿ ನಿಂತಿರುವುದು ಈ ರಾಜ್ಯದ ದೌರ್ಭಾಗ್ಯ ಎಂದರು.

ಲೋಕಾಯುಕ್ತ ವರದಿಯ ಪ್ರಕಾರ ಅಕ್ರಮ ಗಣಿ ಹಗರಣದಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟ 1 ಲಕ್ಷ ಕೋಟಿ ರೂ. ಈ ಮೊತ್ತವನ್ನು ಸರ್ಕಾರದ ಖಜಾನೆಗೆ ಮರಳಿ ಪಡೆಯಲು ಹಾಗೂ ಕಳ್ಳರಿಗೆ ತಕ್ಕ ಶಿಕ್ಷೆ ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಬಿಜೆಪಿ ಸರ್ಕಾರ ಎಷ್ಟು ಬೇಜವಾಬ್ದಾರಿ ಪಕ್ಷ ಎಂದರೆ ಕಳೆದ ಮೂರುವರೆ ವರ್ಷಗಳಲ್ಲಿ 1 ಯೂನಿಟ್ ವಿದ್ಯುತ್ ಉತ್ಪಾದಿಸುವಲ್ಲಿ ವಿಫಲಗೊಂಡಿದೆ.

ಸದಾನಂದಗೌಡರು ಯಡಿಯೂರಪ್ಪನ ಭಂಟರಂತೆ ವರ್ತಿಸುತ್ತಾ ಲೋಕಾಯುಕ್ತ ವರದಿ ಯನ್ನು ಮೂಲೆಗುಂಪು ಮಾಡಲು ಹೊರಟಿ ್ದದಾರೆ. ಒಬ್ಬ ಶಾಸಕನಲ್ಲದ ವನನ್ನು ಯಾವುದೋ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಕಾಯುತ್ತಿದ್ದ ವ್ಯಕ್ತಿಯನ್ನು ಏಕಾಏಕಿ ಮುಖ್ಯಮಂತ್ರಿಯನ್ನಾಗಿ ಆರಿಸಿ ರುವ ಹಿಂದಿನ ಗುಟ್ಟೇನು ಎಂದರು.

ಅಡ್ವಾಣಿಯವರು ಭ್ರಷ್ಟಾಚಾರದ ವಿರುದ್ಧ   6 ನೇ ರಥಯಾತ್ರೆ ಕೈಗೊಂಡಿದ್ದಾರೆ. ಅದು ಅವರದೇ ಪಕ್ಷದ ನರೇಂದ್ರ ಮೋದಿ ಎಂಬಾತ ಪ್ರಧಾನ ಮಂತ್ರಿ ಸ್ಥಾನಕ್ಕೆ ಪ್ರತಿಸ್ಪರ್ಧಿ ಎಂಬ ಕಾರಣಕ್ಕೆ. ಅವರು ಯಾವ ಆಧಾರದ ಮೇಲೆ ಕರ್ನಾಟಕದಲ್ಲಿ ರಥಯಾತ್ರೆ ಮಾಡುತ್ತಾರೆ.

ಇಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಗರಣಗಳ ಸರಮಾಲೆ ಹಾಕಿಕೊಂಡು ಸ್ಥಾನ ವಂಚಿತರಾಗಿ ಮನೆ ಸೇರಿದ್ದಾರೆ. ಅವರ ಎಷ್ಟೋ ಪಕ್ಷದ ನಾಯಕರು ಜೈಲಿನಲ್ಲಿದ್ದಾರೆ. ಇನ್ನು ಹಲವರು ಸಿಕ್ಕಿ ಬೀಳುವ ಸಾಧ್ಯತೆ ಇದೆ. ಇದೆಲ್ಲದರ ನಡುವೆ ಯಾವ ಪುರುಷಾರ್ಥಕ್ಕೆ ಅಡ್ವಾಣಿಯವರು ಕರ್ನಾಟಕದಲ್ಲಿ ರಥಯಾತ್ರೆ ಮಾಡುತ್ತಾರೆ ಎಂದು ಟೀಕಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಈ ದೇಶದ ಶಕ್ತಿ. ಈ ದೇಶವನ್ನು ಸಮರ್ಥವಾಗಿ ಆಳ ಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬಂದಂತೆ. ಜೈಲು-ಬೇಲು, ಮುರುಕಲು ಸೈಕಲ್-ಹರುಕಲು ಸೀರೆ ಇದೇ ಬಿಜೆಪಿ ಸಾಧನೆ. ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಯಾವುದೇ ರಕ್ಷಣೆ ಇಲ್ಲ. ಈ ರಾಜ್ಯ ಸುಭದ್ರ ವಾಗಿರಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅತ್ಯಗತ್ಯ ಎಂದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಗಮಂಗಲ ತಾಲ್ಲೂಕಿನ ಶಾಸಕ ಕೆ.ಸುರೇಶ್‌ಗೌಡ, ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ, ಕೆ.ಆರ್.ಪೇಟೆ ಶಾಸಕ ಕೆ.ಬಿ.ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಹುಚ್ಚೇ ಗೌಡ, ಚಂದ್ರೇಗೌಡ, ಡಿ.ಶಿವಲಿಂಗಯ್ಯ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಹಾಗು ತಾಲ್ಲೂಕು ಪಂಚಾಯಿತಿ ಸದಸ್ಯರು ಉಪಸ್ಥಿತ ರಿದ್ದರು. ಮುಖಂಡರಾದ ಬಿ.ಸಿ. ಮೋಹನ್‌ಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.