ADVERTISEMENT

ರೇಣುಕಾ ಎಲ್ಲಮ್ಮದೇವಿ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 6:45 IST
Last Updated 7 ಫೆಬ್ರುವರಿ 2012, 6:45 IST

ಮದ್ದೂರು: ಪಟ್ಟಣದ ಶಕ್ತಿದೇವತೆ ಶ್ರೀರೇಣುಕಾ ಎಲ್ಲಮ್ಮದೇವಿಯ 40ನೇ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭಗೊಂಡಿತು.

 ಮೂರು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವಕ್ಕೆ ಪಟ್ಟಣವು ವಿವಿಧ ಪುಷ್ಪ-ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯಲು ಅನುಕೂಲವಾಗುವಂತೆ ಬೇಕಾದ ಸಿದ್ಧತೆಗಳು ಪೂರ್ಣಗೊಂಡಿದೆ.

ಮಂಗಳವಾರ ನಡೆಯುವ 13ನೇ ಮಹಾಚಂಡಿಕಾ ಯಾಗ ನೆರವೇರಿಸಲು ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕರ ಶಶಿಶೇಖರ ದೀಕ್ಷಿತ್ ಪಟ್ಟಣಕ್ಕೆ ಆಗಮಿಸಿ, ದೇಗುಲದ ಆವರಣದಲ್ಲಿ ಯಾಗದ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಿದರು.

ಯಾಗಕ್ಕೆ ಮುನ್ನ ಸೋಮವಾರ ಸಂಜೆಯಿಂದ ಮೂಲದೇವರ ಅನುಜ್ಞೆ, ಗಣಪತಿ ಪೂಜೆ, ಗಂಗಾಪೂಜೆ, ಸ್ವಸ್ತಿವಾಚನ, ಪಂಚಗವ್ಯ ಆರಾಧನೆ, ದೇವನಾಂದಿ, ದಿಕ್ಪಾಲಕರ ಪಝೆ, ಭೂಶಾಂತಿ ನವಗ್ರಹಪೂಜೆ, ಯಾಗಾಶಾಲಾ ಪ್ರವೇಶ, ಗಣಪತಿ ಹೋಮ, ನವಗ್ರಹ ಹೋಮ, ಉತ್ತಮ ಹೋಮಾದಿಗಳು, ಸುದರ್ಶನ ಹೋಮ, ಬಲಿಹರಣ ಹಾಗೂ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ಪೂಜಾ ಕೈಂಕರ್ಯಗಳು ತಡರಾತ್ರಿವರೆಗೆ ನಡೆದವು.

ಇಂದು ಚಂಡಿಕಾಹೋಮ: ಜಾತ್ರಾ ಮಹೋತ್ಸವದ ಅಂಗವಾಗಿ 13ನೇ ಮಹಾಚಂಡಿಕಾ ಹೋಮ ಮಂಗಳವಾರ ಬೆಳಿಗ್ಗೆ 6ಗಂಟೆಯಿಂದ ಗಣಪತಿ ಪ್ರಾರ್ಥನೆ, ರಕ್ಷಾಬಂಧನ, ಸಪ್ತದೇವಿ ಪಾರಾಯಣದೊಂದಿಗೆ ಬೆಳಿಗ್ಗೆ 6ಗಂಟೆಯಿಂದ ಆರಂಭಗೊಳ್ಳಲಿದೆ.

ಇದಲ್ಲದೇ ಬೆಳಿಗ್ಗೆ 7.30ರಿಂದ  ಶ್ರೀರೇಣುಕಾದೇವಿಗೆ ವೇದ ಪಾರಾಯಣ ಹಾಗೂ ಮಹಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12.30ಗಂಟೆಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಅಲ್ಲದೇ ಆಗಮಿಸುವ 10ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಶ್ರೀರೇಣುಕಾ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ದೇಗುಲ ಧರ್ಮದರ್ಶಿಗಳಾದ ಟಿ.ಶ್ರೀನಿವಾಸ್, ವಿ.ಅಂಜನಪ್ಪ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.