ADVERTISEMENT

ರೈತರಿಂದ ಸೆಸ್ಕ್‌ ಕಚೇರಿಗೆ ರೈತರ ಮುತ್ತಿಗೆ

ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 8:47 IST
Last Updated 8 ಮಾರ್ಚ್ 2018, 8:47 IST

ಮದ್ದೂರು: ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಯಲ್ಲಾದಹಳ್ಳಿ ಗ್ರಾಮದ ರೈತರು ಪಟ್ಟಣದ ಸೆಸ್ಕ್‌ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸೆಸ್ಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಅವರು, ಕಚೇರಿ ಎದುರು ಅರ್ಧಗಂಟೆಗೂ ಹೆಚ್ಚು ಕಾಲ ಧರಣಿ ಪ್ರತಿಭಟನೆ ಮಾಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎ.ಶಂಕರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಸೆಸ್ಕ್ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಕಾರಣ ಕೊಳವೆಬಾವಿ ಆಶ್ರಿತ ರೈತರ ಬೆಳೆಗಳು ಒಣಗುತ್ತಿವೆ. ಸೆಸ್ಕ್ ಅಧಿಕಾರಿಗಳು ಕೂಡಲೇ ಎಚ್ಚೆತ್ತು, ಪ್ರತಿನಿತ್ಯ 6ರಿಂದ 8ಗಂಟೆ ತ್ರಿಫೇಸ್ ವಿದ್ಯುತ್ ನೀಡುವ ಮೂಲಕ ರೈತರ ಬೆಳೆಗಳ ರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಹೋರಾಟ ಇನ್ನಷ್ಟು ಉಗ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸ್ಥಳಕ್ಕೆ ಬಂದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ನಾಗಭೂಷಣ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್‌ ಆಕ್ರೋಶಗೊಂಡ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.

ರೈತ ಮುಖಂಡರಾದ ಲಿಂಗಪ್ಪಾಜಿ, ಹೊನ್ನಲಗೇಗೌಡ, ಗುರುಮೂರ್ತಿ , ಬೋರೇಗೌಡ, ಸಂಜಯ್, ನಂಜಯ್ಯ, ಮಧು, ಆತ್ಮಾನಂದ, ಪ್ರಸನ್ನ, ಉಮೇಶ್, ರಾಜು, ಸತೀಶ್,ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.