ADVERTISEMENT

ರೈತರಿಗೆ ಮಾರುಕಟ್ಟೆ ದರದ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 10:25 IST
Last Updated 12 ಜೂನ್ 2011, 10:25 IST

ಪಾಂಡವಪುರ: ರೈಲ್ವೆ ಮೇಲ್ಸೇತುವೆ ನಿರ್ಮಾಣದ  ಲೆವೆಲ್ ಕ್ರಾಸ್ಸಿಂಗ್ ಸಂಬಂಧಪಟ್ಟಂತೆ ಸಭೆಯು ಪಟ್ಟಣ ಉಪವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಜಿ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ನಡೆಯಿತು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, `ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸಾಗಿಸಲು ಎತ್ತಿನ ಗಾಡಿಗಳ ಪ್ರಯಾಣಕ್ಕೆ ತೊಂದರೆಯಾಗಬಾರದು, ಲೆವೆಲ್ ಕ್ರಾಸ್ಸಿಂಗ್ ನಿರ್ಮಾಣಕ್ಕೆ ವಶಪಡಿಸಿಕೊಂಡ ರೈತರ ಭೂಮಿಗೆ ಇಂದಿನ ಮಾರುಕಟ್ಟೆಗೆ ಅನುಗುಣವಾಗಿ ಪರಿಹಾರ ನೀಡಬೇಕು. ಮೇಲ್ಸೆತುವೆ ನಿರ್ಮಾಣ ಮಾಡಿದ ಮೇಲೆಯೂ ಕೂಡ ಹಾಲಿ ಇರುವ ರೈಲ್ವೆ ಗೇಟ್ ಬಂದ್ ಮಾಡಬಾರದು. ಈ ನಿಟ್ಟಿನಲ್ಲಿ ಕ್ರಮ ವಹಿಸಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ನಡೆದರೆ ರೈತರಿಂದ ಯಾವುದೆ ವಿರೋಧ ಇಲ್ಲ~ ಎಂದು ಹೇಳಿದರು.

`ಅಧಿಕಾರಿಗಳು ಎಲ್ಲೋ ಒಂದು ಕಡೆ ಕೂತು ಕಾಮಗಾರಿ ನಕ್ಷೆ ನೋಡಿ ತೀರ್ಮಾನ ತೆಗೆದುಕೊಳ್ಳುವ ಬದಲು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಭಾಗದ ರೈತರ ಹಾಗೂ ಸಾರ್ವಜನಿಕರೊಂದಿಗೆ ಸ್ಥಳದಲ್ಲೆ ಚರ್ಚೆ ನಡೆಸಿದ ನಂತರ ತೀರ್ಮಾನ ತೆಗೆದುಕೊಳ್ಳಬೇಕು~ ಎಂದು ಹೇಳಿದರು.

ಸಭೆಯ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಿದ ಉಪವಿಭಾಗಾಧಿಕಾರಿ  ಜಿ. ಪ್ರಭು, ರೈತರ ಪರವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಹಾಲಿ ಇರುವ ರೈಲ್ವೆ ಗೇಟ್ ಬಂದ್ ಮಾಡಲಾಗುತ್ತದೆ ಎಂಬ ಆತಂಕ ರೈತರಲ್ಲಿ ಬೇಡ. ರೈತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ನಿಮ್ಮೇಲ್ಲರ ಅಭಿಪ್ರಾಯದಂತೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದರು.
 
ಈಗಾಗಲೆ ಮೇಲ್ಸೆತುವೆ ನಿರ್ಮಾಣದ ಸಂಪರ್ಕ ರಸ್ತೆಗೆ ರೈತರು ಹಾಗೂ ಸಾರ್ವಜನಿಕರಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲಾಗಿದೆ. ಈಚೆಗೆ 31 ಗುಂಟೆ ತರಿ ಭೂಮಿ ಹಾಗೂ 1400 ಅಡಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ನೋಟಿಫಿಕೇಷನ್ ಹೊರಡಿಸಲಾಗಿದೆ. ಈ ಜಮೀನು ಹಾಗೂ ಜಾಗಕ್ಕೆ ಈಗಿನ ಮಾರುಕಟ್ಟೆ ಬೆಲೆಯನ್ನು ಪರಿಹಾರವಾಗಿ ನೀಡಲಾಗುವುದು ಎಂದರು.

ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ರಾಜ್ಯ ಸರ್ಕಾರ ಶೇ. 50 ರಷ್ಟು ಹಣವನ್ನು ನೀಡಲಿದೆ. ಕಾಮಗಾರಿಯನ್ನು ಪ್ರಾರಂಭಿಸಲು ಎಲ್ಲರೂ ಸಹಕರಿಸಿದರೆ ಜನಸಾಮಾನ್ಯರೆಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ, ತಾ.ಪಂ. ಇಒ. ಡಾ.ವೆಂಕಟೇಶಪ್ಪ, ಲೋಕೋಪಯೋಗಿ ಇಂಜಿನಿಯರ್ ದಯಾನಂದ್, ರೈಲ್ವೆ ಅಧಿಕಾರಿ ಸೋಮು,  ಪಿಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ದರಸಗುಪ್ಪೆ ಧನಂಜಯ, ಕೆನ್ನಾಳು ನಾಗರಾಜು, ಜೆಡಿಎಸ್ ಅಧ್ಯಕ್ಷ ಧರ್ಮರಾಜು, ಪ.ಪಂ. ಅಧ್ಯಕ್ಷ ಎಸ್. ಸಿದ್ದೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಅಧ್ಯಕ್ಷ ವಿಜೇಂದ್ರ, ಎಪಿಎಂಸಿ ನಿರ್ದೇಶಕ ಗುರುಸ್ವಾಮಿ, ತಾ.ಪಂ ಸದಸ್ಯೆ ಶೈಲಜ, ಹೊಸೂರು ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.