ADVERTISEMENT

ರೈತರ ತೀವ್ರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 5:45 IST
Last Updated 14 ಜುಲೈ 2012, 5:45 IST

ಶ್ರೀರಂಗಪಟ್ಟಣ: ಮೈಸೂರು ಅರಸರು ಗಂಜಾಂನ ಅಂಜೂರ ಬೆಳೆಗಾರರಿಗೆ 70 ವರ್ಷಗಳ ಹಿಂದೆ ನೀಡಿದ್ದ ಭೂಮಿಯನ್ನು ಕಂದಾಯ ಇಲಾಖೆ ವಶಪಡಿಸಿಕೊಳ್ಳುವ ಯತ್ನ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಅಂಜೂರ ಹಣ್ಣು ಮತ್ತು ತರಕಾರಿ ಬೆಳೆಗಾರರು ಶುಕ್ರವಾರ ಪಟ್ಟಣ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರ ಜೊತೆಗೂಡಿ ಸುಮಾರು ಎರಡು ತಾಸುಗಳ ಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಮಿರ್ಜಾ ಇಸ್ಮಾಯಿಲ್ ದೀವಾನರಾಗಿದ್ದ ಕಾಲದಲ್ಲಿ ಗಂಜಾಂ ಅಂಜೂರ ಬೆಳೆಗಾರರಿಗೆ 5 ರಿಂದ 20 ಗುಂಟೆವರೆಗೆ ಜಮೀನು ನೀಡಲಾಗಿತ್ತು. ಆ ಜಮೀನಿಗೆ ಕಂಪೌಂಡ್ ನಿರ್ಮಿಸಿ ನೀರಾವರಿ ಸೌಲಭ್ಯ ಕೂಡ ಕಲ್ಪಿಸಲಾಗಿತ್ತು.

ಅಂಜೂರದ ಹಣ್ಣಿಗೆ ಬೇಡಿಕೆ ಕಡಿಮೆಯಾದ ಕಾರಣ ಈ ಜಮೀನಿನಲ್ಲಿ ರೈತರು ಇತರ ಹಣ್ಣು, ಸೊಪ್ಪು ಬೆಳೆಯುತ್ತಿದ್ದೇವೆ. ಅದನ್ನೇ ನಂಬಿ ಬದುಕುತ್ತಿದ್ದೇವೆ. ತಾಂತ್ರಿಕ ಕಾರಣ ಗಳಿಂದ ಖಾತೆ ಇತರ ದಾಖಲೆ ಮಾಡಿಸಿಕೊಳ್ಳಲು ಆಗಿಲ್ಲ. ಇದನ್ನೇ ನೆಪವಾಗಿ ಇಟ್ಟುಕೊಂಡು ಕಂದಾಯ ಇಲಾಖೆ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದೆ ಎಂದು ರೈತರಾದ ಎನ್.ಗಂಗಾಧರ್, ವಿಜೇಂದ್ರು, ಕೃಷ್ಣ ಆರೋಪಿಸಿದರು.

ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, 7 ದಶಕಗಳ ಹಿಂದೆ ಮೈಸೂರು ಅರಸರು ನೀಡಿದ ಜಮೀನು ಅನುಭವದಲ್ಲಿರುವ ರೈತರಿಗೆ ಕಾನೂನು ಬದ್ಧವಾಗಿ ಸೇರಬೇಕು. ಅಷ್ಟು ವರ್ಷ ಹಣ್ಣು, ತರಕಾರಿ ಕೃಷಿ ಮಾಡಿಕೊಂಡು ಬಂದಿರುವ ನೂರಾರು ಮಂದಿ ರೈತರು ಅದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ.

ದರಖಾಸ್ತು ಭೂಮಿ ಮಂಜೂರು ಮಾಡುವ ಮಾದರಿಯಲ್ಲಿ ಅಂಜೂರ ಬೆಳೆಯುತ್ತಿದ್ದ ಭೂಮಿ ಯನ್ನು ಸಂಬಂಧಿಸಿದ ರೈತರಿಗೆ ಮಂಜೂರು ಮಾಡಿಕೊಡಬೇಕು. ಜಮೀನು ವಶಪಡಿಸಿಕೊಳ್ಳುವುದು ಅನಿವಾರ್ಯವಾದರೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
 
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಕೆಪಿಸಿಸಿ ಸದಸ್ಯ ಎಂ.ಭಾಸ್ಕರ್ ಮಾತನಾಡಿದರು. ಟಿ.ಎಂ. ಹೊಸೂರು ಮಹೇಶ್, ಶಿವರಾಮೇಗೌಡ. ಜಯಕುಮಾರ್, ರಾಮು, ಬಾಲಕೃಷ್ಣ, ರಘು ಇತರರು ಪ್ರತಿಭಟನೆಯಲ್ಲಿ ಭಗವಹಿಸಿದ್ದರು. ತಹಶೀಲ್ದಾರ್ ಅರುಳ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.