ADVERTISEMENT

ಲೇವಾದೇವಿಗಾರರ ಸುಳಿಗೆ ಸಿಲುಕಬೇಡಿ: ಚಕ್ರವರ್ತಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:21 IST
Last Updated 25 ಸೆಪ್ಟೆಂಬರ್ 2013, 8:21 IST

ನಾಗಮಂಗಲ: ಬ್ಯಾಂಕ್‌ ಮತ್ತು ಸಾರ್ವಜನಿಕರು ನಡುವೆ ಉತ್ತಮ ಬಾಂಧವ್ಯ ಅಗತ್ಯವಾಗಿದೆ. ಇದರಿಂದ ಬ್ಯಾಂಕುಗಳು ಅಭಿವೃದ್ಧಿಯಾಗುವ ಜತೆಗೆ ಜನರ ಬದುಕು ಹಸನಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ ಉಪ ಗವರ್ನರ್‌ ಕೆ.ಸಿ. ಚಕ್ರವರ್ತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಶ್ರೀ ಕ್ಷೇತ್ರ ಆದಿ­ಚುಂಚನಗಿರಿಯಲ್ಲಿ ವಿಜಯಾ ಬ್ಯಾಂಕ್‌ ಮಂಗಳವಾರ ಹಮ್ಮಿಕೊಂಡಿದ್ದ ಆರ್ಥಿಕ ಸೇರ್ಪಡೆ ವಿಸ್ತರಣೆ ಕಾರ್ಯಕ್ರಮದ ಅಂಗವಾಗಿ 10 ಹೊಸ ಶಾಖೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಹಕರು ಲೇವಾದೇವಿಗಾರರ ಸುಳಿಯಲ್ಲಿ ಸಿಲುಕದೆ ಬ್ಯಾಂಕುಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪ­ಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಬಡ ಜನರ ದುಡಿಮೆಗೆ ಅವಕಾಶ ಕಲ್ಪಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಕೃಷಿ ಕ್ಷೇತ್ರವನ್ನು ಅಭಿವೃದ್ಧಿ­ಪಡಿಸಲು ರೈತ ಸಮುದಾಯಕ್ಕೆ ಅಗತ್ಯ­ವಾದ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕುಗಳು ಹೆಚ್ಚು ಪ್ರಚುರಪಡಿಸಬೇಕು. ಸ್ವಸಹಾಯ ಸಂಘಗಳಿಗೆ ಸಾಲ ಯೋಜನೆ, ಶಿಕ್ಷಣ ಸಾಲ, ಗೃಹಸಾಲ, ವಾಹನ ಸಾಲ ನೀಡುವ ಜತೆಗೆ ಬಡ ಮತ್ತು ಕೂಲಿ ಕಾರ್ಮಿಕರ ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡು ಅವರ ಪದವಿ ಶಿಕ್ಷಣದ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್‌ ಯೋಜನೆ ರೂಪಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯಾದ್ಯಂತ 10 ಹೊಸ ಶಾಖೆಗಳಾದ ಮಲ್ಲನಕುಪ್ಪೆ, ತೂಬಿನಕೆರೆ, ಚಿಕ್ಕಮಂಡ್ಯ, ಲಕ್ಷ್ಮೀಸಾಗರ, ಚಂದಗಾಲು, ಚಿಕ್ಕಅರಸಿನಕೆರೆ, ನೇರಳಕೆರೆ, ಹೊಸಹಳ್ಳಿ, ಕಳೆಗಾಲ ಹಾಗೂ ಕುಂದೂರಲ್ಲಿ  ನೂತನ ಶಾಖೆಗಳಿಗೆ ಉಪ ಗವರ್ನರ್‌ ಚಕ್ರವರ್ತಿ ಚಾಲನೆ ನೀಡಿದರು.

ವಿಜಯಾ ಬ್ಯಾಂಕಿನ ಅಧ್ಯಕ್ಷ  ಎಚ್‌.ಎಸ್‌. ಉಪೇಂದ್ರ ಕಾಮತ್‌ ಮಾತನಾಡಿ, ಹಳ್ಳಿಯ ಸಾಮಾನ್ಯ ಮನುಷ್ಯನಿಗೂ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಮುಖ್ಯವಾಹಿನಿಗೆ ಆತನನ್ನು ಪರಿಚಯಿಸುವುದು ವಿಜಯಾ ಬ್ಯಾಂಕಿನ ಮುಖ್ಯ ಉದ್ದೇಶ. ಕೃಷಿ ಹಾಗೂ ಸ್ವಯಂ ಉದ್ಯೋಗ ಮಾಡುವವರಿಗೆ ತರಬೇತಿ ನೀಡಿ ಬ್ಯಾಂಕ್‌ ಅವರಿಗೆ ಸಾಲ ಸೌಲಭ್ಯ ನೀಡುವ ಯೋಜನೆ ರೂಪಿಸಿದೆ.   ವಿಶೇಷವಾಗಿ ಗ್ರಾಮೀಣ ಪ್ರದೇಶದ ದುರ್ಬಲ ವರ್ಗದ ಆರ್ಥಿಕಮಟ್ಟವನ್ನು ಸುಧಾರಿಸುವ ಪ್ರಯತ್ನ ನಮ್ಮದಾಗಿದೆ ಎಂದರು.

ಕೃಷಿ ಕಾರ್ಮಿಕರಾದ ಸಿ.ಎಸ್‌. ಮಾನಸಾ, ಸೌಮಾ್ಯ, ಪುಣ್ಯಶ್ರೀ, ಎಚ್‌. ಜ್ಯೋತಿ, ಸಿ.ಎಸ್‌. ಪ್ರಿಯಾಂಕಾ, ಟಿ.ಸಿ. ಕಾವ್ಯಾ, ಎನ್‌.ಎಸ್‌. ನವ್ಯಶ್ರೀ, ಎಚ್‌. ಸ್ಮಿತಾ, ಎಲ್‌.ಎಸ್‌. ಸಂಜನಾ ಹಾಗೂ ನಮಿತಾ ವಿದ್ಯಾರ್ಥಿನಿಯರನ್ನು ವಿಜಯಾ ಬ್ಯಾಂಕ್‌ ದತ್ತು ತೆಗೆದು­ಕೊಂಡಿತು. ವಿದ್ಯಾರ್ಥಿನಿಯರ ಪದವಿ ಶಿಕ್ಷಣದವರೆಗಿನ ಶೈಕ್ಷಣಿಕ ಖರ್ಚು ವೆಚ್ಚವನ್ನು ಬ್ಯಾಂಕ್‌ ಭರಿಸಲಿದ್ದು, ಅರ್ಹತಾಪತ್ರ ವಿತರಿಸಲಾಯಿತು. ವಿವಿಧ ಸಾಲ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಅರ್ಹತಾಪತ್ರ ಹಾಗೂ ಚೆಕ್‌ ವಿತರಿಸಿದರು.

ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರು­ಷೋತ್ತಮಾ­ನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಭಾರತೀಯ ರಿಸರ್ವ್‌ ಬ್ಯಾಂಕಿನ ಬೆಂಗಳೂರು ವಿಭಾಗದ ನಿರ್ದೇಶಕರಾದ ಉಮಾ ಶಂಕರ್‌, ವಿಜಯಾ ಬ್ಯಾಂಕಿನ ನಿರ್ದೇಶಕ ಕೆ.ಆರ್‌. ಶೆಣೈ, ಭಾರತೀಯ ಜೀವ ವಿಮಾ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ವಿಕಾಸ್‌ರಾವ್‌ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.