ADVERTISEMENT

ವಿದ್ಯಾಲಯಕ್ಕೆ ಅಡಚಣೆ ಇಲ್ಲ: ಜಿಲ್ಲಾಡಳಿತ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 7:15 IST
Last Updated 1 ಏಪ್ರಿಲ್ 2011, 7:15 IST

ಮಂಡ್ಯ: ಭೂ ಒತ್ತುವರಿ ಆರೋಪಗಳ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಈಗಿನ ಸರ್ಕಾರಿ ಮಹಾವಿದ್ಯಾಲಯದ ಸ್ವಾಧೀನದಲ್ಲಿ ವಾಸ್ತವವಾಗಿ 39.22 ಎಕರೆ ಭೂಮಿ ಇದ್ದು, ಇದರಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿ ನಿಲಯದ ಸ್ಥಳವು ಸೇರಿದೆ. ಲಭ್ಯವಿರುವ ಮಾಹಿತಿ ಅನುಸಾರ ಸರ್ಕಾರಿ ಆದೇಶ ಸಂಖ್ಯೆ 24/39 -40, ದಿನಾಂಕ 19-10- 1939ರ ಅನ್ವಯ ಜಿಲ್ಲಾಧಿಕಾರಿ ಹಾಗೂ ಮಹಾವಿದ್ಯಾಲಯಕ್ಕೆ ಪ್ರತ್ಯೇಕವಾಗಿ ಎಷ್ಟು ಎಕರೆ ಜಮೀನು ನಿಗದಿಪಡಿಸ ಲಾಗಿದೆ ಎಂಬುದಕ್ಕೆ ದಾಖಲೆಯೇ ಲಭ್ಯವಾಗುತ್ತಿಲ್ಲ.

ಮಹಾವಿದ್ಯಾಲಯದ ಭೂಮಿಯು ಒತ್ತುವರಿಯಾಗಿದ್ದು, ಸ್ವಾಧೀನ ಪಡೆಯಬೇಕು ಎಂದು ಈಗ ಹೋರಾಟ ನಡೆಸುತ್ತಿರುವ ಜಿಲ್ಲಾ ವಿದ್ಯಾರ್ಥಿ ಕ್ರಿಯಾ ಸಮಿತಿಗೆ ಬರೆದಿ ರುವ ಪತ್ರದಲ್ಲಿ ಸ್ವತಃ ಜಿಲ್ಲಾಡಳಿತವೇ ಈ ವಿಷಯವನ್ನು ತಿಳಿಸಿದೆ. ಒತ್ತುವರಿಯಾಗಿದೆ ಎಂದು ಈಗ ಆರೋಪಿಸಿಸುತ್ತಿರುವ, ಹದ್ದು ಹಿಡಿದ ಹಳ್ಳ ಪ್ರದೇಶದ ಕುರಿತು ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ವಾದ ಮಂಡನೆಗೆ ವಿಶೇಷ ವಕೀಲರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆದಿದೆ.

ಇಂಥ ವಿಷಯಗಳ ಬಗೆಗೆ ವಿನಾಕಾರಣ ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದು, ಧರಣಿ, ಪ್ರತಿಭಟನೆ ನಡೆಸುವುದು ಕಾನೂನು ಬಾಹಿರವಾಗುತ್ತದೆ ಎಂದು ಜಿಲ್ಲಾಧಿ ಕಾರಿಗಳು ವಿದ್ಯಾರ್ಥಿ ಸಂಘಕ್ಕೆ ಬರೆದ ಪತ್ರದಲ್ಲಿ  ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರಿ ಮಹಾವಿದ್ಯಾಲಯ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಗೆಂದೂ ಸ್ವಾಧೀನ ಪಡೆಯಲಾದ ಒಟ್ಟು ವಿಸ್ತೀರ್ಣದ ಪೈಕಿ ಈಗ 7.13 ಎಕರೆ ಪ್ರದೇಶವನ್ನು  ಕಾಲೇಜಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ಅಲ್ಲದೆ, ಅಧಿಸೂಚನೆ ಆರ್‌ಡಿ164/ ಎಕ್ಯೂ  1ರ ಅನ್ವಯ 24.07 ಎಕರೆ ಜಮೀನು ಕೂಡಾ ಮಹಾ ವಿದ್ಯಾ ಲಯದ ಸ್ವಾಧೀನದಲ್ಲಿದೆ ಎಂದು ತಿಳಿಸಿದೆ.|

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ವರ್ಗಾಯಿಸಿದ ಭೂಮಿ ಹೊರತು ಪಡಿಸಿ ಉಳಿದ ಪ್ರದೇಶಕ್ಕೆ ಸಂಬಂಧಿಸಿ ಪಹಣಿಗಳಲ್ಲಿ ವಿದ್ಯಾಲಯದ ಹೆಸರನ್ನು ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈಗ ಮಹಾವಿದ್ಯಾಲಯಕ್ಕೆ ಸ್ವಾಧೀನವಾಗಿರುವ ಒಟ್ಟು ವಿಸ್ತೀರ್ಣದಲ್ಲಿ 1 ಎಕರೆ ಪ್ರದೇಶದಲ್ಲಿ ಕೃಷಿ ಇಲಾಖೆ, ಭೂ ಸೇನಾ ನಿಗಮದ ಕಚೇರಿಗಳಿವೆ. ಇವು ಸರ್ಕಾರಿ ಕಚೇರಿ ಆಗಿದ್ದು, ಅಲ್ಲಿಯೇ ಮುಂದುವರಿಸ ಬೇಕಾಗಿದೆ. ಇವುಗಳಿಂದ ವಿದ್ಯಾಲ ಯಕ್ಕೆ ಯಾವುದೇ ರೀತಿಯ ಅಡಚಣೆ ಆಗುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.