ADVERTISEMENT

ವಿವಿಧೆಡೆ ಬೆಂಕಿ ಆಕಸ್ಮಿಕ: ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 10:50 IST
Last Updated 24 ಫೆಬ್ರುವರಿ 2012, 10:50 IST

ಕೃಷ್ಣರಾಜಪೇಟೆ: ತಾಲ್ಲೂಕಿನ ವಿವಿಧೆಡೆ ಸಂಭವಿಸಿರುವ ಗುರುವಾರ ಸಂಭವಿಸಿದ ಪ್ರತ್ಯೇಕ ಅಗ್ನಿ ಆಕಸ್ಮಿಕಗಳಲ್ಲಿ ಬತ್ತದ ಹುಲ್ಲಿನ ಮೆದೆ, ದನದ ಕೊಟ್ಟಿಗೆ ಮತ್ತು ಕಬ್ಬಿನ ಬೆಳೆ ಅಗ್ನಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯ ದಾಸೇಗೌಡರ ಜಮೀನಿನಲ್ಲಿ ಬತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು,  ನಷ್ಟವುಂಟಾಗಿದೆ. ಹಾದನೂರು ಗ್ರಾಮದ ಬಳಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು, ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟುಹೋಗಿದೆ.

ಕುಪ್ಪಹಳ್ಳಿ ಗ್ರಾಮದ ಅಣ್ಣಪ್ಪ ಅವರಿಗೆ ಸೇರಿದ ಹುಲ್ಲಿನ ಮೆದೆ ಹಾಗೂ ಸಮೀಪದಲ್ಲಿಯೇ ಇದ್ದ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.  

ತಾಲ್ಲೂಕಿನ ಹಿರಳಹಳ್ಳಿಯಲ್ಲಿ ಗುರುವಾರ ಸಂಜೆ ಜಮೀನಿನಲ್ಲಿದ್ದ ವಿದ್ಯುತ್ ಕಂಬದಿಂದ ಹಾರಿದ ವಿದ್ಯುತ್ ಕಿಡಿಯ ಪರಿಣಾಮ ಹೊತ್ತಿಕೊಂಡ ಬೆಂಕಿಯಿಂದ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಹೋಗಿದೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಗ್ರಾಮದ ಪುಟ್ಟಮ್ಮ ಎಂಬುವರ ಎರಡೂವರೆ ಎಕರೆ ಮತ್ತು ಬೊಮ್ಮರಾಯಿಗೌಡರ ಅರ್ಧ ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಬ್ಬು ಅಗ್ನಿಗೆ ಆಹುತಿಯಾಗಿದೆ. ಒಟ್ಟು ಸುಮಾರು 3ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಸೆಸ್ಕ್ ಎಂಜಿನಿಯರ್ ಶಿವಶಂಕರಮೂರ್ತಿ, ಗ್ರಾ.ಪಂ ಸದಸ್ಯ ವೆಂಕಟೇಶ್ ಭೇಟಿ ನೀಡಿದ್ದರು. ನಷ್ಟವಾಗಿರುವ ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.