ADVERTISEMENT

ವಿವೇಕಾನಂದ ನಗರ: ಸಮಸ್ಯೆಗಳ ಆಗರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 8:10 IST
Last Updated 16 ಏಪ್ರಿಲ್ 2012, 8:10 IST

ಮಂಡ್ಯ: ನಗರದಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಗಮನದಲ್ಲಿಟ್ಟು ಕೊಂಡು ದಶಕದ ಹಿಂದೆ ನಿರ್ಮಿಸಿದ್ದ ವಿವೇಕಾನಂದ ನಗರ ಬಡಾವಣೆ ಇನ್ನೂ ಮೂಲ ಸೌಕರ್ಯ ಕಂಡಿಲ್ಲ. ಅಲ್ಲಿನ, ನಿವೇಶನಗಳಲ್ಲಿ ಬೆಳೆದಿರುವ ಗಿಡಗೆಂಟೆಗಳಿಂದಾಗಿ, ಅದು ಬಡಾವಣೆ ಎಂದು ಗುರುತಿಸಲಾಗ ದಂಥ ಸ್ಥಿತಿಗೆ ತಲುಪಿದೆ.

ನೀರು, ರಸ್ತೆ, ಒಳಚರಂಡಿ, ಉದ್ಯಾನ ಅಭಿವೃದ್ಧಿ ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಕೊರತೆ ಇನ್ನೂ ಉಳಿದಿರುವುದರಿಂದಲೇ, ಅಲ್ಲಿ ನಿವೇಶನ ಹೊಂದಿರುವವರು ಮನೆ ನಿರ್ಮಿಸಲು ಹಿಂದೇಟು ಹಾಕಲು ಕಾರಣ. ಬಡಾವಣೆ ಅಭಿವೃದ್ಧಿ ಪಡಿಸ ಬೇಕಿದ್ದ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಮಾತ್ರ ಇನ್ನೂ ನಿದ್ರಾವಸ್ಥೆಯಲ್ಲೇ ಇದೆ.

ವಿದ್ಯಾ ನಾಗೇಂದ್ರ ಅವರು, ಮುಡಾ ಅಧ್ಯಕ್ಷೆಯಾಗಿದ್ದಾಗ 2009ರಲ್ಲಿ ಟೆಂಡರ್ ನೀಡಿ ಈ ಬಡಾವಣೆಯಲ್ಲಿ ಬೆಳದಿದ್ದ ಗಿಡಗೆಂಟೆ ತೆಗೆಸಿ, ಸ್ವಚ್ಛಗೊಳಿಸಲು ಕ್ರಮಕೈಗೊಂ ಡಿದ್ದರು. ಇದಕ್ಕೆ, ತಗುಲಿದ ವೆಚ್ಚವನ್ನು ಮುಡಾ ವತಿಯಿಂದ ಭರಿಸಲಾಗಿತ್ತು.

ಮೂರು ವರ್ಷಗಳ ಬಳಿಕ ಬಡಾ ವಣೆ ಮತ್ತದೇ ಸ್ವರೂಪ ಪಡೆದು ಕೊಂಡಿದೆ. ಬೆಳೆದಿರುವ ಗಿಡಗೆಂಟೆಗ ಳಿಂದಾಗಿ ಅದು ಬಡಾವಣೆ ಎಂದು ಗುರುತಿಸಲಾಗದ ಸ್ಥಿತಿಗೆ ತಲುಪಿದೆ.

ನಿವೇಶನದಲ್ಲಿ ಬೆಳದಿರುವ ಗಿಡಗೆಂಟೆಗಳು ರಸ್ತೆಯನ್ನು ಬಹುತೇಕ ಆವರಿಸಿಕೊಂಡಿದ್ದು, ವಿಷಜಂತುಗಳಿಗೆ ವಾಸಸ್ಥಳವಾಗಿದೆ. ಇಲ್ಲಿನ ಪರಿಸರ ನಿರ್ಜನವಾಗಿರುವುದು ಹಾಗೂ ಗಿಡಗೆಂಟೆ ವ್ಯಾಪಕವಾಗಿ ಬೆಳೆದಿರುವು ದರಿಂದ ಕಳ್ಳತನ ಸೇರಿದಂತೆ ಅನ್ಯ ಉದ್ದೇಶಗಳಿಗೆ ಬಳಕೆ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಈ ಬಡಾವಣೆಯನ್ನು ಎ, ಬಿ, ಸಿ, ಡಿ, ಇ, ಎಫ್ ಬ್ಲಾಕ್‌ಗಳೆಂದು ವಿಗಂಡಿಸಲಾಗಿದ್ದು, ಯಾವು ಕೂಡ ಇನ್ನೂ ಅಭಿವೃದ್ಧಿಯಾಗಿಲ್ಲ. ರಸ್ತೆಗಳ ಸ್ಥಿತಿಯಂತೂ ಹೇಳುವುದೇ ಬೇಡ. ಡಾಂಬರು ಕಾಣದ, ಸಮತಟ್ಟಲ್ಲದ ಮಣ್ಣಿನ ರಸ್ತೆಗಳು ತೀರಾ ಅಧ್ವಾನವಾಗಿದೆ.

`ಒಳಚರಂಡಿ ವ್ಯವಸ್ಥೆ ಇಲ್ಲ. ಬೀದಿ ದೀಪ ನಿರ್ವಹಣೆ ಅಷ್ಟಕಷ್ಟೇ. ಮೋರಿಗಳೆಲ್ಲಾ ಹೂತು ಹೋಗಿವೆ. ಕಾವೇರಿ ನೀರು ಸಂಪರ್ಕಕ್ಕೆ ಕೊಳಾಯಿ ಹಾಕಿಸಿದ್ದರೂ, ಇನ್ನು ಸಂಪರ್ಕ ದೊರೆತಿಲ್ಲ. ಬೋರ್‌ವೆಲ್‌ನಿಂದ ಪಂಪ್‌ಮಾಡಿ ಪೂರೈಸುವ ಕುಡಿಯುವ ನೀರು ಗಡುಸಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ~ ಎನ್ನುತ್ತಾರೆ `ಬಿ~ ಬ್ಲಾಕ್ ನಿವಾಸಿ ಸಿದ್ದರಾಜು.

ಮುಡಾ ಅಧ್ಯಕ್ಷ ಬಸವೇಗೌಡ ಅವರು, `ನಿವೇಶನ ಸ್ವಚ್ಛವಾಗಿ ಟ್ಟುಕೊಳ್ಳುವುದು ನಿವೇಶನದಾರರ ಕರ್ತವ್ಯ. ಅದನ್ನು ಅವರೇ ಮಾಡಿಕೊ ಳ್ಳಬೇಕೆ ವಿನಾಃ ನಮ್ಮ ಹೊಣೆಯಲ್ಲ. ನಿವೇಶನ ಚೊಕ್ಕವಾಗಿ ಇಟ್ಟುಕೊಳ್ಳ ದಿರುವುದು ತಮ್ಮ ಗಮನಕ್ಕೆ ಬಂದಿದ್ದು, ದಂಡ ಹಾಕುವುದು ಸೇರಿದಂತೆ, ಕಾನೂನು ರೀತಿ ಇತರೆ ಕ್ರಮ ಜರುಗಿಸಲಾಗುವುದು~ ಎನ್ನುತ್ತಾರೆ.

ನಿವೇಶನದಾರರು, ಇಂತಿಷ್ಟು ದಿನಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬೇಕೆಂಬುದು ನಿಯಮ. ಅದನ್ನು ಪಾಲಿಸದಿದ್ದರೆ, ನಿವೇಶನ ಮಂಜೂರಾತಿಯನ್ನು ರದ್ದುಪಡಿಸಿ, ವಶಕ್ಕೆ ಪಡೆಯುವ ಬಗೆಗೂ ಚಿಂತಿಸ ಲಾಗುವುದು ಎಂದರು.

ಬಡಾವಣೆ ಅಭಿವೃದ್ಧಿ ಕುರಿತ ಪ್ರಶ್ನೆಗೆ, ಯುಜಿಡಿ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ನಡೆದಿದ್ದು, ಶೀಘ್ರ ಕೆಲಸ ಆರಂಭ ವಾಗಲಿದೆ. ನಂತರ ಹಂತಹಂತವಾಗಿ ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ 25-30 ಕೋಟಿ ರೂ. ಹಣ ವ್ಯಯಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಮೊನ್ನೆಮೊನ್ನೆಯಷ್ಟೇ, ಇಲ್ಲಿನ ಬಡಾವಣೆಯ `ಎ~ ಮತ್ತು `ಎಫ್~ ಬ್ಲಾಕ್‌ನ ಮೂಲೆ ಮತ್ತು ವಾಣಿಜ್ಯ ನಿವೇಶನಗಳನ್ನು ಹರಾಜು ಹಾಕಲಾ ಗಿತ್ತು. 24 ನಿವೇಶನಗಳ ಹರಾಜು ಪ್ರಕ್ರಿಯೆಯಿಂದ, ಪ್ರಾಧಿಕಾರಕ್ಕೆ ಸುಮಾರು 4 ಕೋಟಿ ರೂ. ಬಂಡವಾಳ ಕ್ರೋಡೀಕರಣವಾಗಿದೆ.

ಮುಡಾ ಸುಪರ್ಧಿಯಲ್ಲಿರುವ ಈ ಬಡಾವಣೆಯ ನಿವೇಶನಗಳನ್ನು ಹರಾಜು ಮಾಡಿದರೆ, ಸುಮಾರು 75 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಯಿದೆ. ಮುಡಾ ಬೊಕ್ಕಸಕ್ಕೆ ಸಾಕಷ್ಟು ಅದಾಯವಿದ್ದರೂ, ಅಭಿವೃದ್ಧಿ ಮಾಡಲು ಮನಸ್ಸು ಮಾಡುತ್ತಿಲ್ಲ ಎನ್ನುವ ಆರೋಪಗಳಿಗೆ ಕಾಲವೇ ಉತ್ತರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.