ADVERTISEMENT

ವೇತನ ಜಾರಿಗೆ ಆಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 4:04 IST
Last Updated 17 ಡಿಸೆಂಬರ್ 2013, 4:04 IST

ಮದ್ದೂರು: ಗುತ್ತಿಗೆ ಪೌರಕಾರ್ಮಿಕರಿಗೆ ಸರ್ಕಾರ ನಿಗಿದಿಗೊಳಿಸಿರುವ ಕನಿಷ್ಟ ವೇತನ ಜಾರಿಗೊಳಿಸಲು ಆಗ್ರಹಿಸಿ  ಕರ್ನಾಟಕ ರಾಜ್ಯ ಗುತ್ತಿಗೆ  ಪೌರಕಾರ್ಮಿಕ ಸಂಘದ ಸದಸ್ಯರು ಪಟ್ಟಣ ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪುರಸಭೆ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಬಳಿಕ ಒಂದು ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರು.
ರಾಜ್ಯ ಗುತ್ತಿಗೆ ಪೌರಕಾರ್ಮಿಕ ಸಂಘದ ಗೌರವಾಧ್ಯಕ್ಷ ಎಂ.ಬಿ. ನಾಗಣ್ಣ ಮಾತನಾಡಿ, ಪಟ್ಟಣದ ಪುರಸಭೆಯಲ್ಲಿ 2011ರಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ  ಸರ್ಕಾರ ನಿಗಿದಿಗೊಳಿಸಿರುವ ಕನಿಷ್ಟ ವೇತನ ಜಾರಿಗೊಳಿಸಬೇಕು.

ಈ ಕಾರ್ಮಿಕರು ಹಲವಾರು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಬಾಕಿ ವೇತನ ನೀಡಿಲ್ಲ. ಜಿಲ್ಲೆಯ ಉಳಿದ ಸ್ಥಳಿಯ ಸಂಸ್ಥೆಗಳು ಬಾಕಿ ವೇತನ  ನೀಡಿವೆ. ಪಟ್ಟಣದ ಪುರಸಭೆ ಮಾತ್ರ ಇದುವರೆಗೂ ನೀಡಿಲ್ಲ. ಕಾರ್ಮಿಕರು

ಡಿ. 13ರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದರೂ ಕ್ರಮ ಕೈಗೊಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಪುರಸಭೆ ಸಿಒ ಗಂಗಾಧರ್ ಹಾಗೂ ಅಧ್ಯಕ್ಷ ಪರ್ವಿಜ್‌ಪಾಷ ಉದ್ರಿಕ್ತ ಪ್ರತಿಭಟನಾಕಾರನ್ನು ಸಮಧಾನಪಡಿಸಿ, ಕಾರ್ಮಿಕರ ಬಾಕಿ ವೇತನ ಬಿಡುಗಡೆ ಸೇರಿದಂತೆ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಕ್ರಮ ಜರುಗಿಸುವುದಾಗಿ ತಿಳಿಸಿದ ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.

ಕಾರ್ಮಿಕ ಮುಖಂಡರಾದ ಸತೀಶ್, ಶ್ರೀನಿವಾಸ್, ರಂಗನಾಥ್, ನಿಂಗಣ್ಣ, ಪಳೀನಿ, ಕಣ್ವ, ಸರಸಮ್ಮ, ಲಕ್ಷ್ಮಿ, ರಘು, ಮಣಿಕಂಠ, ಮದ್ದೂರಮ್ಮ ಸೇರಿದಂತೆ ಹಲವರು ಹಾಜರಿದ್ದರು.

ಸ್ಮಾರಕಗಳ ವಿರೂಪ: ಪ್ರತಿಭಟನೆ
ಶ್ರೀರಂಗಪಟ್ಟಣ: ಪಟ್ಟಣದ ಐತಿಹಾಸಿಕ ಬತೇರಿ ಸೇರಿದಂತೆ ಪ್ರಸಿದ್ಧ ಸ್ಮಾರಕಗಳನ್ನು ವಿರೂಪ ಗೊಳಿಸಲಾಗುತ್ತಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆ ಕಾರ್ಯಕರ್ತರು ಸೋಮವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ 50ಕ್ಕೂ ಹೆಚ್ಚು ಸ್ಮಾರಕಗಳಿದ್ದು, ಅವುಗಳ ಬಳಿ ತಿಪ್ಪೆಗಳ ರಾಶಿಯೇ ಬಿದ್ದಿದೆ. ವಿಜಯನಗರ ಕಾಲದ ನಿರ್ಮಾಣಗಳಲ್ಲಿ ಒಂದಾದ ಬತೇರಿಯ ಆಸು ಪಾಸಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಬತೇರಿಗೆ ಸಗಣಿಯಿಂದ ಬೆರಣಿ ತಟ್ಟಿ ಅಂದಗೆಡಿಸಲಾಗುತ್ತಿದೆ ಎಂದು ವೇದಿಕೆ ತಾಲ್ಲೂಕು ಅಧ್ಯಕ್ಷೆ ಮಾಲಾಶ್ರೀ ದೂರಿದರು.

ಸ್ಮಾರಕಗಳ ಸುತ್ತಲಿನ ಪರಿಸರ ಸ್ವಚ್ಛ ಗೊಳಿಸಬೇಕು ಎಂದು ಗಂಜಾಂ ರಮೇಶ್‌ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸ್ಮಾರಕಗಳ ಪರಿಸರ ಸ್ವಚ್ಛತೆಗೆ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿದರು. ನಂಜುಂಡ, ಮಮತಾ, ಸುಧಾ, ಅಜಯ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.