ADVERTISEMENT

ಶಿಲ್ಪ ಸೌಂದರ್ಯ ಊರಿನ `ಪಟ್ಟ' ಯಾರಿಗೆ?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 11:22 IST
Last Updated 16 ಏಪ್ರಿಲ್ 2013, 11:22 IST

ಮಂಡ್ಯ: ಜಿಲ್ಲೆಯಲ್ಲಿ ಹೊಯ್ಸಳ ಶಿಲ್ಪ ಸೌಂದರ್ಯಕ್ಕೆ ಹೆಸರುವಾಸಿಯಾದ ಹಾಗೂ ಹೇಮಾವತಿ ನದಿಯ ಕೃಪೆಗೆ ಪಾತ್ರವಾದ ವಿಧಾನಸಭಾ ಕ್ಷೇತ್ರ ಕೃಷ್ಣರಾಜಪೇಟೆ. ರಾಜ್ಯದ ವಿಧಾನಸಭೆಗೆ ಸಭಾಧ್ಯಕ್ಷರನ್ನು ನೀಡಿರುವ ಹಿರಿಮೆ ಕೂಡ ಈ ಕ್ಷೇತ್ರದ್ದು.

ಕಳೆದ 6 ದಶಕದ ರಾಜಕೀಯ ಇತಿಹಾಸದಲ್ಲಿ ಒಂದು ಉಪ ಚುನಾವಣೆ ಸೇರಿದಂತೆ ಒಟ್ಟು 14 ಚುನಾವಣೆಗಳು ನಡೆದಿದೆ. 7 ಬಾರಿ ಕಾಂಗ್ರೆಸ್, 4 ಬಾರಿ ಜನತಾ ಪರಿವಾರ, 3 ಬಾರಿ ಪಕ್ಷೇತರರು ಚುನಾಯಿತರಾಗಿದ್ದಾರೆ.

ಸಂತೇಬಾಚಹಳ್ಳಿ, ಶೀಳನೆರೆ, ಬೂಕನಕೆರೆ, ಅಕ್ಕಿಹೆಬ್ಬಾಳು, ಕಿಕ್ಕೇರಿ, ಕಸಬಾ ಹೋಬಳಿಗಳನ್ನು ಒಳಗೊಂಡಿದೆ.

1952ರ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿದಿದ್ದ ಎಸ್.ಎಂ.ಲಿಂಗಪ್ಪ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ಎಲ್.ನಂಜಪ್ಪ ನಾಡಿಗ್ ಮತ್ತು ಬಿ.ಕೆಂಪೇಗೌಡ ಎದುರು ಗೆದ್ದರು.

1957ರಲ್ಲಿ ಪಿಎಸ್‌ಪಿಯಿಂದ ಕೆ.ಎಲ್.ನಂಜಪ್ಪ ನಾಡಿಗ್, ಪಕ್ಷೇತರರಾಗಿದ್ದ ಎನ್.ನಂಜೇಗೌಡ ಅವರ ಎದುರು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗೆ ಇಳಿದ ಎಂ.ಕೆ.ಬೊಮ್ಮೇಗೌಡರಿಗೆ ಮತದಾರರು ಒಲವು ತೋರಿದರು.

1962ರಲ್ಲಿ ಮಾಜಿ ಶಾಸಕ ಎಂ.ಕೆ.ಬೊಮ್ಮೇಗೌಡರನ್ನೇ ಕಾಂಗ್ರೆಸ್ ಮತ್ತೆ ಕಣಕ್ಕೆ ಇಳಿಸಿತು. ಆದರೆ, 1957ರ ಚುನಾವಣೆಯಲ್ಲಿ ಸೋತಿದ್ದ ಪಕ್ಷೇತರ ಅಭ್ಯರ್ಥಿ ಎನ್.ನಂಜೇಗೌಡರಿಗೆ ಮತದಾರರು ನಿಷ್ಠೆ ತೋರಿದರು.

1967ರ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ರಾಜಕೀಯ ಏರಿಳಿತ ಕಾಣಿಸಿಕೊಂಡಿತು. ಒಮ್ಮೆ ಗೆದ್ದು, ಮತ್ತೊಮ್ಮೆ ಪರಾಭವಗೊಂಡಿದ್ದ ಎಂ.ಕೆ.ಬೊಮ್ಮೇಗೌಡರಿಗೆ `ಕೈ'ಟಿಕೆಟ್ ತಪ್ಪಿತು. ಪಕ್ಷದ ಹಿರಿಯ ನಾಯಕ ಎಸ್.ಎಂ.ಲಿಂಗಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯಿತು. ಜಿದ್ದಾಜಿದ್ದ ಚುನಾವಣೆಯಲ್ಲಿ ಬೊಮ್ಮೇಗೌಡ ಅವರು ಭರ್ಜರಿ ಗೆಲುವನ್ನೇ ಪಡೆದರು.

1972ರಲ್ಲಿ ಬೊಮ್ಮೇಗೌಡರ ವಿರುದ್ಧ ಕಾಂಗ್ರೆಸ್ ಮತ್ತೆ ಎಸ್.ಎಂ.ಲಿಂಗಪ್ಪ ಅವರನ್ನೇ ಎದುರಾಳಿಯಾಗಿಸಿತು. ಈ ಬಾರಿ ಲಿಂಗಪ್ಪ ಅವರಿಗೆ ಮತದಾರರು ನಿಷ್ಠೆ ತೋರಿದರು.

1978ರ ವೇಳೆಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಗೊಂಡಿದ್ದರಿಂದ ಎಸ್.ಎಂ.ಲಿಂಗಪ್ಪ ಈ ಬಾರಿ ಜನತಾ ಪಕ್ಷದಿಂದ ಅಖಾಡಕ್ಕೆ ಧುಮುಕಿದರು. ಆಗ ಮತದಾರರು ಮತ್ತೆ ಲಿಂಗಪ್ಪ ಅವರನ್ನೇ ಬೆಂಬಲಿಸಿದರು.

ಈವರೆವಿಗೂ ಎಸ್.ಎಂ.ಲಿಂಗಪ್ಪ, ಬೊಮ್ಮೇಗೌಡ, ನಂಜೇಗೌಡರ ಮಧ್ಯೆ ನಡೆಯುತ್ತಿದ್ದ ಸ್ಪರ್ಧೆಯು 1983ರ ವೇಳೆಗೆ ಎಲ್ಲವೂ ಬದಲಾಗಿ ಹೋಯಿತು. ಕಾಂಗ್ರೆಸ್‌ನಿಂದ ಎಂ.ಪುಟ್ಟಸ್ವಾಮಿಗೌಡ, ಜನತಾ ಪಕ್ಷದಿಂದ ಕೃಷ್ಣ ಎದುರುಬದುರಾದರು. ಅಂತಿಮವಾಗಿ ಮತದಾರರು `ಕೈ' ಪಕ್ಷವನ್ನು ಹಿಡಿದರು.

1985ರಲ್ಲಿ ಜನತಾ ಪಕ್ಷದ ಕೃಷ್ಣ, 1989ರಲ್ಲಿ ಕಾಂಗ್ರೆಸ್‌ನ ಎಂ.ಪುಟ್ಟಸ್ವಾಮಿಗೌಡ, 1994ರಲ್ಲಿ ಜನತಾ ದಳ ಪಕ್ಷದಿಂದ ಚುನಾಯಿತರಾಗುವ ಕೃಷ್ಣ ವಿಧಾನಸಭಾ ಸ್ಪೀಕರ್ ಆಗಿಯೂ ಕೆಲಸ ನಿರ್ವಹಿಸಿದರು.

ನಂತರ ನಡೆಯುವ ಲೋಕಸಭೆ ಚುನಾವಣೆಯಲ್ಲಿ `ಸೋಲಿಲ್ಲದ ಸರದಾರ' ಜಿ.ಮಾದೇಗೌಡ ಎದುರು ಭರ್ಜರಿ ಗೆಲುವನ್ನು ಪಡೆಯುವ ಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1996ರಲ್ಲಿ ಜರುಗುವ ಉಪ ಚುನಾವಣೆಯಲ್ಲಿ ಜನತಾ ದಳ ಬಂಡಾಯ ಅಭ್ಯರ್ಥಿ ಬಿ.ಪ್ರಕಾಶ್ ಗೆದ್ದರು. 1999ರಲ್ಲಿ ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್, 2004ರಲ್ಲಿ ಜನತಾ ದಳದ ಕೃಷ್ಣ, 2008ರಲ್ಲಿ ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್ ಜಯ ದಾಖಲಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.