ಮದ್ದೂರು: ಇತಿಹಾಸ ಪ್ರಸಿದ್ಧ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಸಮಗ್ರ ಅಭಿವೃದ್ಧಿಗೆ ಪ್ರಾಚ್ಯವಸ್ತು ತಜ್ಞರಿಂದ ಅಗತ್ಯ ವಿನ್ಯಾಸ ರೂಪಿಸಬೇಕು ಎಂದು ಶಾಸಕ ಬಿ.ರಾಮಕೃಷ್ಣ ಸೂಚನೆ ನೀಡಿದರು.
ಸಮೀಪದ ಶಿವಪುರ ಧ್ವಜ ಸತ್ಯಾಗ್ರಹಸೌಧದಲ್ಲಿ ಬುಧವಾರ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಧ್ವಜ ಸೌಧ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರವಾಸೋದ್ಯಮದ ಅಭಿವೃದ್ಧಿಯ ನಿಟ್ಟಿನಲ್ಲಿ ಸೌಧದ ಆವರಣದಲ್ಲಿ ಸುಂದರ ಉದ್ಯಾನ, ಧ್ವನಿ ಬೆಳಕಿನ ವ್ಯವಸ್ಥೆ, ಖಾದಿ ಭಂಡಾರ ಹಾಗೂ ಅಗತ್ಯ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಮಾತನಾಡಿ, ಸೌಧದ ಅಭಿವೃದ್ಧಿಗೆ ಈಗಾಗಲೇ ರೂ.1ಕೋಟಿ ಬಿಡುಗಡೆಗೊಂಡಿದೆ. ಅಂಕೋಲ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ರೂಪುರೇಷೆ ನೀಡಿದ ಪ್ರಖ್ಯಾತ ವಾಸ್ತುಶಿಲ್ಪಿ ಗಲಗಲಿ ಅವರಿಂದ ಶಿವಪುರ ಸೌಧಕ್ಕೆ ಹೊಸ ಆಕರ್ಷಕ ರೂಪ ನೀಡುವಂತೆ ವಿನಂತಿಸಲಾಗಿದೆ. ಅಲ್ಲದೇ ಸೌಧದ ರಕ್ಷಣೆ ಹಾಗೂ ನಿರ್ವಹಣೆಗೆ ಸ್ಥಳೀಯ ಪುರಸಭೆ ಹಾಗೂ ಗೃಹರಕ್ಷಕ ದಳವನ್ನು ಇಂದಿನಿಂದಲೇ ನಿಯೋಜಿಸಲಾಗುವುದು ಎಂದರು.
ಶಾಸಕಿ ಕಲ್ಪನಾ ಸಿದ್ದರಾಜು ಮಾತನಾಡಿ, ಸೌಧದ ಹೊರ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಆವರಣ ಬೇಲಿ ನಿರ್ಮಿಸಲು ಅಗತ್ಯವಾದ ಅನುದಾನವನ್ನು ತಮ್ಮ ಶಾಸಕ ನಿಧಿಯಿಂದ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲಲಿತಾಪ್ರಕಾಶ್, ಸದಸ್ಯ ಕೆ.ರವಿ, ಮಾಜಿ ಸದಸ್ಯ ಸ್ವರೂಪಚಂದ್, ಸಿಇಒ ಜಯಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿಳಿಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್, ಸೌಧ ಉಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಡಾ.ಅಪ್ಪಾಜಿಗೌಡ, ಸದಸ್ಯರಾದ ಕೆ.ಟಿ.ಚಂದು, ಸೌಭಾಗ್ಯ ಮಹದೇವು, ಮುಖ್ಯ ಎಂಜಿನಿಯರ್ ಕುಮಾರ್, ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ತಾಲ್ಲೂಕುಕಸಾಪಅಧ್ಯಕ್ಷ ಅಪೂರ್ವಚಂದ್ರ, ಪ್ರಕಾಶ್, ಮಹೇಂದ್ರ ಇತರರು ಇದ್ದರು.
ಪ್ರಜಾವಾಣಿ ಫಲಶ್ರುತಿ
ಮದ್ದೂರು: ಐತಿಹಾಸಿಕ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗಾಗಿ ಒತ್ತಾಯಿಸಿದ ಓದುಗರೊಬ್ಬರ ಪತ್ರವನ್ನು (ಆ.21ರಂದು) ಮಂಗಳವಾರ `ಪ್ರಜಾವಾಣಿ~ಯ ಕುಂದುಕೊರತೆ ವಿಭಾಗದಲ್ಲಿ ಪ್ರಕಟಿಸಲಾಗಿತ್ತು.
ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರು ಬುಧವಾರ ಶಿವಪುರ ಸೌಧಕ್ಕೆ ಭೇಟಿ ನೀಡಿ ಉಸ್ತುವಾರಿ ಸಮಿತಿ ಸಭೆ ನಡೆಸಿ, ನಂತರ ಸೌಧದ ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳ ಸಲಹೆ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.