ADVERTISEMENT

ಶುಲ್ಕ ಹೆಚ್ಚಳ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 4:05 IST
Last Updated 14 ಅಕ್ಟೋಬರ್ 2012, 4:05 IST

ಶ್ರೀರಂಗಟ್ಟಣ: ಮೈಸೂರು ವಿಶ್ವವಿದ್ಯಾನಿಲಯ 2012-13ನೇ ಸಾಲಿನ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಪದವಿ ವಿದ್ಯಾರ್ಥಿಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕಾಲೇಜು ಆವರಣದಿಂದ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಮೈಸೂರು ವಿಶ್ವವಿದ್ಯಾನಿಲಯದ ವಿರುದ್ಧ ಘೋಷಣೆ ಕೂಗಿದರು. ಕೆಲ ಹೊತ್ತು ಹೆದ್ದಾರಿ ತಡೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.

ಪದವಿ ವಿದ್ಯಾರ್ಥಿಗಳ 5 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನು 10 ಪಟ್ಟು ಹೆಚ್ಚಿಸಲಾಗಿದೆ. ರೂ.160 ಇದ್ದ ಪರೀಕ್ಷಾ ಶುಲ್ಕವನ್ನು ರೂ.1,552ಕ್ಕೆ ಏರಿಸಲಾಗಿದೆ. ಬಿಬಿಎಂ ವಿದ್ಯಾರ್ಥಿಗಳ ಪದವಿ ಪರೀಕ್ಷಾ ಶುಲ್ಕ ರೂ.1,905ಕ್ಕೆ ಏರಿಕೆಯಾಗಿದೆ ಎಂದು ದೂರಿದರು.

ಪರೀಕ್ಷಾ ಶುಲ್ಕದ ಜತೆಗೆ ಘಟಿಕೋತ್ಸವ ಪ್ರಮಾಣಪತ್ರಕ್ಕೆ ಹೆಚ್ಚುವರಿ ರೂ.750 ಶುಲ್ಕ ಭರಿಸಬೇಕಾಗಿದೆ. ಏಕಾಏಕಿ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಚ್ಚುವರಿ ಶುಲ್ಕ ಭರಿಸುತ್ತಿತ್ತು. ಈ ಬಾರಿ ಆ ಇಲಾಖೆಯಿಂದ ಹಣ ಬಂದಿಲ್ಲ. ಹಾಗಾಗಿ ಪರೀಕ್ಷಾ ಶುಲ್ಕ ಹೆಚ್ಚಾಗಿದೆ ಎಂದು ಉಪನ್ಯಾಸಕರು ಹೇಳುತ್ತಿದ್ದಾರೆ.

ವಿಶ್ವವಿದ್ಯಾನಿಲಯ ಹೆಚ್ಚಿಗೆ ಮಾಡಿರುವ ಪರೀಕ್ಷಾ ಶುಲ್ಕವನ್ನು ಹಿಂಪಡೆಯಬೇಕು. ಈ ಮೊದಲಿದ್ದ ಶುಲ್ಕವನ್ನೇ ಪಡೆಯಬೇಕು ಎಂದು ವಿದ್ಯಾರ್ಥಿಗಳಾದ ರವಿ, ಅವಿನಾಶ್, ರಾಕೇಶ್ ಒತ್ತಾಯಿಸಿದರು. ಶಿವಶೇಖರ್, ಪ್ರೀತಿ, ಪವಿತ್ರರಾಣಿ, ಪಿ.ಮಾನಸ, ಕೆ.ಎಂ.ಉಮಾ, ಬಿಂದು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೆಆರ್‌ಎಸ್: ಪರೀಕ್ಷಾ ಶುಲ್ಕ ಹೆಚ್ಚಿಸಿರುವ ಮೈಸೂರು ವಿಶ್ವವಿದ್ಯಾನಿಲಯದ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಪದವಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಕಾಲೇಜಿನಿಂದ ಅರಳಿ ಮರ ವೃತ್ತದ ಮಾರ್ಗವಾಗಿ ಸಂತೆ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಂಜುನಾಥ್, ಪ್ರಸನ್ನಕುಮಾರ್, ಕೀರ್ತಿ, ಶ್ರುತಿ, ರಂಜಿತಾ, ಶ್ವೇತಾ, ಚೈತ್ರ, ಸುಷ್ಮಾ, ಮನು, ಪ್ರದೀಪ್ ಇತರರು ಪ್ರತಭಟನೆಯಲ್ಲಿ ಭಾಗವಹಿಸಿದ್ದರು. ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.