ADVERTISEMENT

ಸಂಚಾರ ಒತ್ತಡ ನಿವಾರಣೆ: ಬೈ ಪಾಸೋ..? ಫ್ಲೈ ಓವರೋ...?

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 8:20 IST
Last Updated 20 ಆಗಸ್ಟ್ 2012, 8:20 IST

ಮಂಡ್ಯ: ಮೈಸೂರು-ಬೆಂಗಳೂರು ರಸ್ತೆಯ ಸಂಚಾರ ಒತ್ತಡ ನಿವಾರಣೆಗೆ ಫ್ಲೈ ಓವರ್ ಬೇಕೇ ? ಅಥವಾ ಬೈ ಪಾಸ್ ರಸ್ತೆ ಬೇಕೇ ಎನ್ನುವ ಚರ್ಚೆ ಸಾಗಿದೆ. ಕೆಲವರು ಫ್ಲೈ ಓವರ್ ಬೇಕು ಎಂದು ವಾದಿಸುತ್ತಿದ್ದರೆ, ಇನ್ನೂ ಕೆಲವರು ಬೈ ಪಾಸೇ ಸೂಕ್ತ ಎಂದು ವಾದಿಸುತ್ತಿದ್ದಾರೆ.

ಮಂಡ್ಯದ ಹೊರವಲಯದಲ್ಲಿ ಬೈ ಪಾಸ್ ನಿರ್ಮಿಸಬೇಕು ಎಂಬ ಮಾತುಗಳು 2007 ರಿಂದ ಕೇಳಿ ಬರುತ್ತಿವೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ರಾಜ್ಯ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಗೆ, ಇಲಾಖೆಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ ವ್ಯವಹಾರಗಳು ನಡೆದವೇ ಹೊರತೂ, ಕಾರ್ಯ ರೂಪಕ್ಕೆ ಬರಲಿಲ್ಲ.

ಮುಡಾ ಅಧ್ಯಕ್ಷರಾಗಿರುವ ಬಸವೇಗೌಡ ಅವರು, ಬೈ ಪಾಸ್ ಬೇಡ, ಫ್ಲೈ ಓವರ್ ನಿರ್ಮಾಣ ಮಾಡೋಣ ಎಂಬ ವಿಚಾರವನ್ನು ಹರಿ ಬಿಟ್ಟಿದ್ದಾರೆ.

ಬೈ ಪಾಸ್ ನಿರ್ಮಿಸಿದರೆ, ರೈತರ 171 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಬೇಕಾಗುತ್ತದೆ. ರೈತರೂ ಭೂಮಿಯನ್ನು ನೀಡಲು ಸಿದ್ಧರಿಲ್ಲ. ಜತೆಗೆ ವಶ ಪಡಿಸಿಕೊಂಡ ಭೂಮಿಗೂ ಸೇರಿ, ಬೈ ಪಾಸ್ ನಿರ್ಮಾಣಕ್ಕೆ 600 ಕೋಟಿ ರೂಪಾಯಿ ಯವರೆಗೂ ಖರ್ಚಾಗುತ್ತದೆ. ಅದರ ಬದಲಾಗಿ, ಫ್ಲೈ ಓವರ್ ಅನ್ನು ಕೇವಲ 150 ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ಮಾಡಬಹುದು.

ಹೊಸದಾಗಿ ಭೂಮಿ ಬೇಕಾಗುವುದಿಲ್ಲ. ಸುತ್ತು ಬಳಸಿಯೂ ಹೋಗಬೇಕಾಗುವುದಿಲ್ಲ ಎನ್ನುವುದು ಬಸವೇಗೌಡ ಅವರ ವಾದ.

ಆದರೆ, ಇನ್ನೊಂದೆಡೆ ವಿಧಾನ ಪರಿಷತ್ ಸದಸ್ಯ ಅಶ್ವಥ ನಾರಾಯಣ್ ಹಾಗೂ ಶಾಸಕ ಎಂ. ಶ್ರೀನಿವಾಸ್ ಅವರು, ಫ್ಲೈ ಓವರ್ ಬೇಡ. ಬೈ ಪಾಸ್ ರಸ್ತೆಯನ್ನೇ ನಿರ್ಮಾಣ ಮಾಡಬೇಕು ಎಂಬ ವಾದ ಮಂಡಿಸುತ್ತಾರೆ.

ಫ್ಲೈ ಓವರ್ ಮಾಡುವುದರಿಂದ ಇಕ್ಕಟ್ಟಾ ಗುತ್ತದೆ. ಸಂಚಾರ ಒತ್ತಡ ನಿವಾರಣೆಗೆ ಶಾಶ್ವತ ಪರಿಹಾರ ಕಂಡಕೊಂಡಂತಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮಂಡ್ಯ ನಗರದ ಅಭಿವೃದ್ಧಿ ಯಾಗುತ್ತದೆ. ಇದರಿಂದ ಕೈಗಾರಿಕೆಗಳು ಈ ಕಡೆಗೆ ಆಗಮಿಸುತ್ತವೆ ಎಂಬುದು ಅವರ ವಿಚಾರ.

ಮೈಸೂರು-ಬೆಂಗಳೂರು ರಸ್ತೆಯಲ್ಲಿ ವಾಹನಗಳ ಸಂಚಾರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದನ್ನು ನಿವಾರಿಸಿಕೊಳ್ಳಲು ಪರಿಹಾರವೊಂದನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ತೀವ್ರತೆ ಮತ್ತಷ್ಟು ಹೆಚ್ಚಲಿದೆ

ಬೈ ಪಾಸ್ ಅಥವಾ ಫ್ಲೈ ಓವರ್; ಯಾವುದು ಸೂಕ್ತ ಎಂಬ ಬಗ್ಗೆ ತಾಂತ್ರಿಕ ಪರಿಣಿತರಿಂದ ವರದಿ ತರಿಸಿಕೊಳ್ಳಲಿ. ಈ ಕುರಿತು ಚರ್ಚೆಗಳು ನಡೆಯಲಿ. ಆದರೆ ಪರ್ಯಾಯ ವ್ಯವಸ್ಥೆಯನ್ನು ಮಾಡಲೇಬೇಕು ಎನ್ನುತ್ತಾರೆ ಎಂ. ಬೋರೇಗೌಡ.
ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು, ಸಂಚಾರ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗುವರೇ ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.