
ನಾಗಮಂಗಲ: ‘ಮನುಷ್ಯನ ಬದುಕಿನಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದ್ದು, ಶಾಂತಿ ನೆಮ್ಮದಿ ಇಲ್ಲದೆ ಜೀವನ ಬರಡು ಮಾಡಿಕೊಳ್ಳುತ್ತಿದ್ದಾನೆ. ತಮ್ಮ ಪಾಲಿಗೆ ಬಂದದ್ದನ್ನು ಆನಂದದಿಂದ ಸ್ವೀಕರಿಸುವ ಸಕಾರಾತ್ಮಕ ದೃಷ್ಟಿ ಕೋನವನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಪೀಠಾಧಿಪತಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದ ಬಿ.ಜಿ.ಎಸ್. ಸಭಾ ಭವನದಲ್ಲಿ ಶ್ರೀ ಮಠದ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಹಿಳಾ ಮತ್ತು ಪುರುಷರ ಜಾಗೃತಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯುವ ಜೊತೆಗೆ ಹೃದಯ ಶ್ರೀಮಂತಿಕೆ, ಪರಸ್ಪರ ಸಹಕಾರ, ಎಲ್ಲರು ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಪ್ರಸ್ತುತ ಸಮಾಜದಲ್ಲಿ ಈ ಅಂಶಗಳು ಮರೆಯಾಗುತ್ತಿರುವುದರಿಂದ ಭಾರತದ ಸಂಸ್ಕೃತಿಯನ್ನು ವಿದ್ಯಾರ್ಥಿ ದಿಸೆಯಿಂದ ಹಾಗೂ ಯುವ ಪೀಳಿಗೆಗೆ ಸಮಗ್ರವಾಗಿ ತಿಳಿಸಿಕೊಡಲು ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಗತ್ತಿನ ಎಲ್ಲ ರಾಷ್ಟ್ರಗಳಿಂದ ಪ್ರಶಂಸಿಲ್ಪಟ್ಟ ನಮ್ಮ ಸಂಸ್ಕೃತಿ ಇಂದು ನಮ್ಮ ದೇಶದ ಮಕ್ಕಳಿಂದಲೇ ಅಳಿವಿನ ಅಂಚಿನಲ್ಲಿದೆ. ಶಿಬಿರದಲ್ಲಿ ನೀಡುವ ‘ಸಂಸ್ಕಾರ ಸೌರಭ’ ಎಂಬ ಪುಸ್ತಕವು ಕೇವಲ ಪುಸ್ತಕವಲ್ಲ, ಅದೊಂದು ಜೀವನದ ಕೈಪಿಡಿ, ಕನ್ನಡ ಧರ್ಮದ ನಿಘಂಟು. ಶಿಬಿರದಲ್ಲಿ ಕಲಿತದ್ದನ್ನು ಶಿಬಿರಾರ್ಥಿಗಳು ಜೀವನದಲ್ಲಿ ಅಳ ವಡಿಸಿಕೊಳ್ಳಬೇಕು. ನಾವು ಅನುಕರಣೆ ಯನ್ನು ಅನುಸರಿಸಿ ನಮ್ಮತನದಿಂದ ಬಹಳ ದೂರಾಗಿದ್ದೇವೆ.ಜಾಗೃತಿ ಶಿಬಿರದಲ್ಲಿ ಕಲಿತ ಮಹಿಳೆ ಮತ್ತು ಪುರುಷರು ತಮ್ಮೊಂದಿಗೆ ಇತರರನ್ನು ಒಳ್ಳೆಯವರನ್ನಾಗಿ ಮಾಡುವ ಸಂಕಲ್ಪ ಮಾಡಬೇಕೆಂದು ಕರೆ ಕೊಟ್ಟರು.
ಶಿಬಿರಾರ್ಥಿಗಳಿಗೆ ಪೂಜಾ ಲೇಖನ ಸಾಮಗ್ರಿಗಳೊಂದಿಗೆ ಸಮವಸ್ತ್ರಗಳನ್ನು ವಿತರಿಸಿದರು. ಮೈಸೂರಿನ ಖ್ಯಾತ ಸಾಹಿತಿ ಡಾ.ಲತಾರಾಜಶೇಖರ್, ಕೆ.ಆರ್.ಪೇಟೆ ತಾಲ್ಲೂಕಿನ ತಹಶೀ ಲ್ದಾರ್ ಎಚ್.ಎಲ್. ನಾಗರಾಜು, ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವ್ಯವಸ್ಥಾಪಕ ರಾಮ ಕೃಷ್ಣೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುರುಷೋತ್ತ ಮಾನಂದನಾಥಸ್ವಾಮೀಜಿ ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು.
ಶಿವಕುಮಾರನಾಥ ಸ್ವಾಮೀಜಿ ವಂದಿಸಿ, ಕಾಲಭೈರವೇಶ್ವರ ಸಂಸ್ಕೃತ ವೇದ ಮತ್ತು ಆಗಮ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ನಂಜುಂಡಯ್ಯ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.