ADVERTISEMENT

ಸರ್ಕಾರಿ ಜಾಹೀರಾತು ಫಲಕ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 12:15 IST
Last Updated 11 ಏಪ್ರಿಲ್ 2018, 12:15 IST

ಮಂಡ್ಯ: 2018ರ ವಿಧಾನಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಾದರೂ ನಗರದ ಕೆಲವೆಡೆ ಸರ್ಕಾರದ ಜಾಹೀರಾತು ಫಲಕ ಹಾಗೂ ಅಲ್ಲಲ್ಲಿ ಗೋಡೆ ಬರಹ ಉಳಿದುಕೊಂಡಿದ್ದು ಅವುಗಳನ್ನು ತೆರವುಗೊಳಿಸುವಂತೆ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಗೋಡೆ ಬರಹ ತೆರವುಗೊಳಿಸಲಾಗಿದೆ. ಆದರೆ ನಗರದ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಳವಡಿಸಿರುವ ಜಾಹೀರಾತು ಫಲಕವನ್ನು ತೆರವು ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.

ಜಿಲ್ಲಾಸ್ಪತ್ರೆಗೆ ನಿತ್ಯ ಬರುವ ಸಾವಿರಾರು ಜನರನ್ನು ಜಾಹೀರಾತು ಆಕರ್ಷಿಸುತ್ತಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿದೆ. ತಕ್ಷಣ ಜಾಹೀರಾತು ಫಲಕ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

ADVERTISEMENT

ನಗರದ ಆರ್.ಪಿ. ರಸ್ತೆಯ ಹಳೆ ಕಾಂಗ್ರೆಸ್ ಕಚೇರಿಯ ಮೇಲೆ ಪಕ್ಷದ ಹೆಸರಿದೆ. ಕಾವೇರಿ ವನದ ಆವರಣದಲ್ಲಿ ಇರುವ ಕಲ್ಲುಬೆಂಚುಗಳ ಮೇಲೆ ಎಸ್.ಎಂ.ಕೃಷ್ಣ ಅನುದಾನ ಎಂಬ ಬರಹ ಉಳಿದಿದೆ. ಕೂಡಲೇ ಇವುಗಳನ್ನೂ ತೆರವು ಮಾಡಬೇಕು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ.ಜಯರಾಮ್, ಟಿ.ಕೆ.ಸೋಮಶೇಖರ್ ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.