ADVERTISEMENT

ಸರ್ವರ ಏಳಿಗೆಗೆ ಗಾಂಧಿ ಹೋರಾಟ: ಸಿಪಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 12:25 IST
Last Updated 28 ಜನವರಿ 2012, 12:25 IST

ಮದ್ದೂರು: ಗಾಂಧೀಜಿ ಅವರು ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಟ ನಡೆಸದೇ, ರಾಷ್ಟ್ರದ ಸರ್ವರ ಏಳಿಗೆಗೆ ಹೋರಾಟ ನಡೆಸಿದ್ದು ವಿಶೇಷ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಶುಕ್ರವಾರ ಅಭಿಪ್ರಾಯಪಟ್ಟರು.

ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಶುಕ್ರವಾರ ಆರಂಭ ಗೊಂಡ ಗಾಂಧೀ ವಿಚಾರ ಪ್ರಣೀತ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ 10ನೇ ವರ್ಷದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

21ನೇ ಶತಮಾನದ ಎರಡು ಅದ್ಭುತ ಸಾಧನೆಗಳೆಂದರೆ ಒಂದು ಚಂದ್ರಲೋಕಯಾನ ಮಾಡಿದ್ದು, ಎರಡು ಅಹಿಂಸಾತ್ಮಕವಾಗಿ ಗಾಂಧೀಜಿ ಅವರು ಸ್ವಾತಂತ್ರ್ಯ ತಂದದ್ದು. ಸದ್ದಿಲ್ಲದ ಇಂತಹ ಸಾಧಕನ ಆದರ್ಶಗಳನ್ನು ಇಂದಿನ ಯುವಜನಾಂಗ ಅನುಸರಿಸುವ ಮೂಲಕ ಪ್ರಕ್ಷುಬ್ಧ ವ್ಯವಸ್ಥೆಯನ್ನು ತಿಳಿಗೊಳಿಸಲು ಮುಂದಾಗಬೇಕು ಎಂದರು.

ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಬಿ.ಎಸ್.ಕೃಷ್ಣಪ್ರಸಾದ್ ಸೇವಾಧಾರೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. ಗಾಂಧೀಜಿ ಈ ಜಗತ್ತಿನ ಆಶಾಕಿರಣ. ದೇಶದಲ್ಲಿನ ಎ್ಲ್ಲಲ ಸಮಸ್ಯೆಗಳ ನಿವಾರಣೆಗೆ ಗಾಂಧಿವಾದವೇ ರಾಮಬಾಣ ಎಂದು ಬಣ್ಣಿಸಿದರು.

ಇದಕ್ಕೂ ಮುನ್ನ ಧ್ವಜ ಸತ್ಯಾಗ್ರಹಸೌಧದಿಂದ ಆರಂಭಗೊಂಡ ಶಾಂತಿ ಯಾತ್ರೆಗೆ ಮಾಜಿ ಸಚಿವ ಆತ್ಮಾನಂದ ಚಾಲನೆ ನೀಡಿದರು. ಧ್ವಜ ಸಮಿತಿ ಅಧ್ಯಕ್ಷ ಬಿ.ಆರ್. ಶ್ರೀನಿವಾಸಮೂರ್ತಿ ಇತರರು ಪಾಲ್ಗೊಂಡಿದ್ದರು. ಮಧ್ಯಾಹ್ನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ ನಡೆಯಿತು.

ಸರ್ವೋದಯ ಕಾರ್ಯಕರ್ತ ಸುರೇಂದ್ರಕೌಲಗಿ ಗಾಂಧೀಜಿ ಮತ್ತು ಸಮಾಜ ಪರಿವರ್ತನೆ ಕುರಿತು, ಸರ್ವೋದಯ ಮಂಡಳಿ ಕಾರ್ಯದರ್ಶಿ ಎಲ್.ನರಸಿಂಹಯ್ಯ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕುರಿತು ಉಪನ್ಯಾಸ ನೀಡಿದರು. ಸಂಜೆ ಗಾಂಧಿ ಕುರಿತು ಚಲನಚಿತ್ರ ಪ್ರದರ್ಶನ ನಡೆಯಿತು.

ಎನ್‌ಎಸ್‌ಎಸ್ ರಾಜ್ಯ ಸಂಪರ್ಕಾ ಧಿಕಾರಿ ಡಾ.ಕೆ.ಬಿ.ಧನಂಜಯ, ಸರ್ವೋ ದಯ ಸಂಚಾಲಕ ಡಾ.ಎಚ್.ಎಸ್. ಸುರೇಶ್, ಸಂಯೋಜನಾಧಿಕಾರಿ ಕೃಷ್ಣ ಪರಮಾತ್ಮ, ಕಾಲೇಜಿನ ನಿರ್ದೇಶಕ ಅಪೂರ್ವಚಂದ್ರ, ಕಾರ್ಯದರ್ಶಿ ಕೆ.ಟಿ.ಚಂದು, ಪ್ರಾಂಶುಪಾಲರಾದ ಪ್ರೊ.ಸಿದ್ದರಾಜು, ಪ್ರೊ.ಪ್ರಕಾಶ್ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿ ಗಳು ಭಾಗವಹಿಸಿದ್ದರು. 

ಜಾಗೃತಿ ಜಾಥಾ ಯಶಸ್ವಿ
ಮಂಡ್ಯ
: ಪರಿಸರ ಕುರಿತ ಜಾಗೃತಿ ಜಾಥಾವನ್ನು ತಾಲ್ಲೂಕಿನ ವಿ.ಸಿ.ಫಾರ್ಮ್‌ನಲ್ಲಿ, ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಈಚೆಗೆ ನಡೆಯಿತು. ಔಷಧಿ ಸಸ್ಯಗಳ ಪರಿಚಯ, ಉಪಯೋಗ ಕುರಿತು ವಲಯ ಕೃಷಿ ಸಂಶೋಧನಾ ಕೇಂದ್ರದ ಎಚ್.ಎ.ವೆಂಕಟೇಶ್, ತೋಟಗಾರಿಕೆ ಬೆಳೆಗಳ ಕುರಿತು ಪ್ರೊ. ನಾಗರಾಜು ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಕೆ.ಎಸ್.ಮಂಜುನಾಥ್, ಸಹ ಶಿಕ್ಷಕ ಬಸವರಾಜು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.