ADVERTISEMENT

ಸಾಲದ ಹೊರೆ ತಗ್ಗಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 10:55 IST
Last Updated 7 ಮಾರ್ಚ್ 2012, 10:55 IST

ಶ್ರೀರಂಗಪಟ್ಟಣ: ಆಶ್ರಯ ಯೋಜನೆ ಫಲಾನುಭವಿಗಳು ಹತ್ತು ವರ್ಷಗಳ ಹಿಂದೆ ಪಡೆದಿರುವ ಸಾಲದ ಹಣವನ್ನು ಕಂತಿನ ರೂಪದಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಆಶ್ರಯ ಯೋಜನೆ ಫಲಾನುಭವಿಗಳು ಪುರಸಭೆ ಸದಸ್ಯರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪುರಸಭೆ ಕಚೇರಿಗೆ ತೆರಳಿದ ಫಲಾನುಭವಿಗಳು ಆಶ್ರಯ ಯೋಜನೆ ಯಡಿ ತಲಾ ರೂ.25 ಸಾವಿರ ಸಾಲ ಪಡೆದು ಮನೆ ಕಟ್ಟಿಕೊಂಡಿದ್ದೇವೆ. ಆದರೆ ಈಗ ಆ ಹಣಕ್ಕೆ ಬಡ್ಡಿ ಹಾಕಿದ್ದು, ದುಪ್ಪಟ್ಟಾಗಿದೆ. ಆಶ್ರಯ ಯೋಜನೆಯ ಸಾಲದ ಹಣವನ್ನು ಕಟ್ಟುವಂತೆ ಪುರಸಭೆಯಿಂದ ನೋಟಿಸ್ ನೀಡ ಲಾಗಿದೆ.
 
ಮಹಮದ್ ಷಾ ಬಡಾ ವಣೆಯ 59 ಮಂದಿ ಫಲಾನುಭವಿ ಗಳು ತಲಾ ರೂ.52 ಸಾವಿರ ಹಣ ಕಟ್ಟುವಂತೆ ಒತ್ತಡ ಹೇರಲಾಗುತ್ತಿದೆ. ಊದುಬತ್ತಿ ಉಜ್ಜುವ ಮತ್ತು ಬೀಡಿ ಕಟ್ಟುವ ಕೆಲಸ ಮಾಡುತ್ತ ಹೊಟ್ಟೆ ಹೊರೆಯುವ ನಮಗೆ ಅಷ್ಟು ಹಣ ಕಟ್ಟಲು ಸಾಧ್ಯವಿಲ್ಲ. ಅಸಲಿನ ಹಣವನ್ನು ಕಂತಿನ ಮೂಲಕ ಹಣ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಶನವಾಜ್, ಶಾಜಿದಾ, ಪರ್ವೀನ್, ಗುಲ್‌ನಾಜ್ ಇತರರು ಒತ್ತಾಯಿಸಿದರು.

  ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಸದಸ್ಯ ಎಂ.ಎಲ್.ದಿನೇಶ್, ಪಟ್ಟಣದ ಕಾವೇರಿಪುರ, ರಂಗನಾಥನಗರ, ಗಂಜಾಂ ಸೇರಿ ಸಾವಿರಕ್ಕೂ ಹೆಚ್ಚು ಮಂದಿ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನೋಟಿಸ್ ನೀಡಲಾಗಿದೆ. ಒಂದೇ ಕಂತಿನಲ್ಲಿ ರೂ.25 ಸಾವಿರ ಸಾಲದ ಹಣ ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಬಗ್ಗೆ ಸುತ್ತೋಲೆ ಬಂದಿದೆ.

ಹಾಗಾಗಿ ನೋಟಿಸ್ ನೀಡಲಾಗುತ್ತಿದೆ. ಕಂತಿನ ರೂಪದಲ್ಲಿ ಸಾಲ ತೀರುವಳಿ ಮಾಡುವ ಸಂಬಂಧ ಶಾಸಕ ರಮೇಶ ಬಂಡಿಸಿದ್ದೇಗೌಡ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು. ಸದಸ್ಯೆ ಭಾಗ್ಯಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.