ಕೃಷ್ಣರಾಜಪೇಟೆ: ಮುಗ್ಧ ಮುಖದ ಬಾಲಕಿಯರ ಶವಗಳನ್ನು ಮುಗಿಬಿದ್ದು ನೋಡುತ್ತಿದ್ದ ಜನರು.. ಕರುಳು ಕಿತ್ತುಬರುವಂತೆ ರೋದಿಸುತ್ತಿದ್ದ ಪೋಷಕರು.. ಪೋಷಕರ ಸ್ಥಿತಿ ಕಂಡು ಮರುಗುತ್ತಿದ್ದ ಬಂಧು ಬಾಂಧವರು.. 
ದಂಡು ದಂಡಾಗಿ ಬಂದು ಪೋಷಕರಿಗೆ ಸಾಂತ್ವನ ಹೇಳುತ್ತಿದ್ದ ಜನ ನಾಯಕರು.. ಮಕ್ಕಳ ಸಾವಿಗೆ ಕಾರಣ ಹುಡುಕುತ್ತಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು.. 
ಸೋಮವಾರ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ಲಕ್ಷ್ಮಮ್ಮ ದುಂಡಶೆಟ್ಟಿ ಸಾರ್ವಜನಿಕ ಆಸ್ಪತ್ರೆಯ ಬಳಿ ಕಂಡುಬಂದ ದೃಶ್ಯಗಳಿವು. 
ಸೋಮವಾರ ಬೆಳಿಗ್ಗೆ 11 ಗಂಟೆಯ ವೇಳೆಗೆ ಆತ್ಮಹತ್ಯೆಗೆ ಶರಣಾದ ಇಬ್ಬರು ಬಾಲೆಯರ ಸಾವಿನ ಸುದ್ದಿ ಕಾಳ್ಗಿಚ್ಚಿನಂತೆ ಇಡೀ ತಾಲ್ಲೂಕಿಗೆಲ್ಲ ಹಬ್ಬಿತ್ತು. ತಾಲ್ಲೂಕು ಕೇಂದ್ರದ ಸಮೀಪದಲ್ಲಿಯೇ ಇರುವ ಅರೆಬೊಪ್ಪನಹಳ್ಳಿ ಗ್ರಾಮದ ಮಂಜೇಗೌಡರ ಮಗಳು ದಿವ್ಯ ಮತ್ತು ಚಿಕ್ಕೋನಹಳ್ಳಿಯ ಲೋಕೇಶ್‌ರ ಮಗಳು ಶ್ರುತಿ ನೇಣು ಹಾಕಿಕೊಂಡು ಇಹಲೋಕ ತ್ಯಜಿಸಿದ್ದರು.
 
ಶಾಲೆಯಲ್ಲಿ ಸದಾ ಜೊತೆಯಾಗಿಯೇ ಇರುತ್ತಿದ್ದ ಈ ಮಕ್ಕಳು ಸಾವಿನಲ್ಲೂ ಒಂದಾಗಿದ್ದಾರೆ. ತೀರಾ ಸೌಮ್ಯ ಸ್ವಭಾವದ ಈ ಮಕ್ಕಳು ಓದಿನಲ್ಲಿ ಸಹ ಹಿಂದೆ ಬಿದ್ದಿರಲಿಲ್ಲ. ಶನಿವಾರವಷ್ಟೇ ತಮ್ಮ  ಸಂಬಂಧಿಕರೊಬ್ಬರ ಮದುವೆಗಾಗಿ ಊರಿಗೆ ಹೋಗಿದ್ದ ಈ ಮಕ್ಕಳು ಭಾನುವಾರ ಮದುವೆ ಮುಗಿಸಿ, ಸೋಮವಾರ ಬೆಳಿಗ್ಗೆ ವಸತಿ ಶಾಲೆಗೆ ಬಂದಿದ್ದರು. ಬೆಳಿಗ್ಗೆ ಬಂದಾಗಿನಿಂದ ಮಂಕಾಗಿದ್ದ ಈ ಮಕ್ಕಳು ಸಹಪಾಠಿಗಳೊಂದಿಗೂ ಮಾತನಾಡಲಿಲ್ಲ ಎಂದು ತಿಳಿದುಬಂದಿದೆ.
ತಮ್ಮ ಸಹಪಾಠಿಗಳು ಶಾಲೆಯ ಸಾಮೂಹಿಕ ಪ್ರಾರ್ಥನೆ ಮುಗಿಸಿ ಬರುವುದರೊಳಗಾಗಿ ಜೀವನ ಪಯಣವನ್ನು ಮುಗಿಸಿದ್ದ ಈ ಮಕ್ಕಳ ಸಾವಿಗೆ ಕಾರಣವಾದ ಅಂಶ ಮಾತ್ರ ಇನ್ನೂ ನಿಗೂಢ. ತಮ್ಮ ಪೋಷಕರು, ಶಿಕ್ಷಕರು ಮತ್ತು ಸಹಪಾಠಿಗಳ ಊಹೆಗೂ ನಿಲುಕದ ಇವರಿಬ್ಬರ ನಿರ್ಧಾರ ಮಾತ್ರ ಘೋರ. 
ಪುಟ್ಟ ಮಕ್ಕಳ ಬದುಕಿನಲ್ಲಿ ಆಟವಾಡಿರುವ ವಿಧಿಯಾಟವೂ ಕ್ರೂರ.  
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.