ADVERTISEMENT

ಸೆಸ್ಕ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:39 IST
Last Updated 4 ಡಿಸೆಂಬರ್ 2012, 6:39 IST

ಕೃಷ್ಣರಾಜಪೇಟೆ: ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ರೈತರ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸುವ ಸಂಬಂಧ ಲಂಚಕ್ಕಾಗಿ ಒತ್ತಾಯಿಸಿದ ಸೆಸ್ಕ್ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ರಾಜ್ಯ ರೈತ ಸಂಘದ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸುಟ್ಟುಹೋದ ಪರಿವರ್ತಕಗಳನ್ನು ಬದಲಿಸುವುದು, ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ರೈತರು ಕಳೆದ ಹಲವು ತಿಂಗಳಿಂದಲೂ ಅಧಿಕಾರಿಗಳ ಎದುರು ಇಟ್ಟಿದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ. ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ನೀತಿ ನಿಯಮಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿಲ್ಲ. ರೈತರ ವಿದ್ಯುತ್ ಸಂಪರ್ಕಗಳನ್ನು ಅಕ್ರಮ ಸಕ್ರಮ ಮಾಡಲು ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದ್ದು, ಅವರು ಉಚಿತವಾಗಿ ಕೆಲಸ ಮಾಡಬೇಕಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅನಗತ್ಯವಾಗಿ 25 ಸಾವಿರ ರೂಪಾಯಿವರೆಗೆ ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಮೈಸೂರಿನ ಸೆಸ್ಕ್‌ನ ಮುಖ್ಯ ಎಂಜಿನಿಯರ್ ಶಾಂತ, ಅಧೀಕ್ಷಕ ಎಂಜಿನಿಯರ್ ಶಿವಪ್ರಸಾದ್, ಸೆಸ್ಕ್ ಅಧಿಕಾರಿಗಳಾದ ರಂಗಸ್ವಾಮಿ, ಪ್ರವೀಣ್ ಮತ್ತಿತರರು ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಒಂದು ಹಂತದಲ್ಲಿ ರೈತರು ಲಂಚ ಕೇಳುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದಾಗ ಸೆಸ್ಕ್‌ನ ಹಿರಿಯ ಅಧಿಕಾರಿಗಳು ಅಂತಹ ಪ್ರಸಂಗ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಿ. ಇದು ನಮ್ಮ ವ್ಯಾಪ್ತಿಗೆ ಬರುವ ಕೆಲಸವಲ್ಲ ಎಂದಾಗ ರೈತರು ಕುಪಿತರಾಗಿ ಅವರ ಮೇಲೆ ಹರಿಹಾಯ್ದರು.

ಅಕ್ರಮ ಸಕ್ರಮ ಯೋಜನೆ ಜಾರಿಗೆ ರೈತರಿಗೆ ಹಣ ಕೇಳಬಾರದು. ಸಾರ್ವಜನಿಕರಿಗೆ ತಿಳಿಯುವಂತೆ ಇಲಾಖೆಯ ಯೋಜನೆಗಳ ಮಾಹಿತಿಯನ್ನು ಪ್ರಕಟಿಸಬೇಕು. ಕೆಟ್ಟುಹೋದ ವಿದ್ಯುತ್ ಪರಿವರ್ತಕಗಳನ್ನು ಸ್ಥಳೀಯವಾಗಿಯೇ ದುರಸ್ತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಪರಿವರ್ತಕಗಳ ಬದಲಾವಣೆಗೆ ರೈತರನ್ನು ಅನಗತ್ಯವಾಗಿ ಅಲೆಸಬಾರದು ಎಂದು ಒತ್ತಾಯಿಸಿದ ರೈತ ಮುಖಂಡರು ತಮ್ಮ ಬೇಡಿಕೆಗಳು ಈಡೇರದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಕೆ.ಆರ್.ಜಯರಾಮು, ಎಂ.ವಿ.ರಾಜೇಗೌಡ, ಮರುವನಹಳ್ಳಿ ಶಂಕರ್, ಮಂಚನಹಳ್ಳಿ ನಾಗೇಗೌಡ, ಬೋರಾಪುರ ಮಂಜುನಾಥ್, ನೀತಿಮಂಗಲ ಮಹೇಶ್, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಅಣ್ಣಯ್ಯ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.