ADVERTISEMENT

ಹಣ ಮಾಡುವುದೇ ಪರಮೋದ್ದೇಶ: ಸಂತೋಷ್‌ ಹೆಗ್ಡೆ ವಿಷಾದ

ಮೈಸೂರು ವಿ.ವಿ. 98ನೇ ಘಟಿಕೋತ್ಸವ; ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 8:44 IST
Last Updated 13 ಮಾರ್ಚ್ 2018, 8:44 IST
ಶ್ರೀರಂಗಪಟ್ಟಣದ ಬಿ.ಯು. ರಂಜನ್‌ ಎಂ.ಫಿಲ್‌ನಲ್ಲಿ 5 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದಿದ್ದು, ಮೈಸೂರು ವಿವಿಯ ಕ್ರಾಫರ್ಡ್‌ ಹಾಲ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ರಂಜನ್‌ ಅವರಿಗೆ ಪದಕ ಪ್ರದಾನ ಮಾಡಿದರು
ಶ್ರೀರಂಗಪಟ್ಟಣದ ಬಿ.ಯು. ರಂಜನ್‌ ಎಂ.ಫಿಲ್‌ನಲ್ಲಿ 5 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದಿದ್ದು, ಮೈಸೂರು ವಿವಿಯ ಕ್ರಾಫರ್ಡ್‌ ಹಾಲ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ರಂಜನ್‌ ಅವರಿಗೆ ಪದಕ ಪ್ರದಾನ ಮಾಡಿದರು   

ಮೈಸೂರು: ‘ಜನರಿಗೆ ಹಣ ಮಾಡುವುದೇ ಪರಮೋದ್ದೇಶವಾಗಿದೆ. ಅದು ಪಾಪದ ಹಣವೊ, ಪುಣ್ಯದ ಹಣವೊ ಎಂಬುದು ಮುಖ್ಯವಾಗುತ್ತಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಏರ್ಪಡಿಸಿದ್ದ 98ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

‘ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ನಮ್ಮ ಮನಸ್ಥಿತಿಯೇ ಕಾರಣವಾಗಿದೆ. ಜನರಲ್ಲಿ ಶ್ರಮದ ಹಣಕ್ಕೂ, ಪಾಪದ ದುಡ್ಡಿಗೂ ವ್ಯತ್ಯಾಸವಿಲ್ಲ. ಶ್ರೀಮಂತರಾಗುವುದಷ್ಟೇ ಆದ್ಯತೆ; ಮಾರ್ಗ ಮುಖ್ಯವಾಗುತ್ತಿಲ್ಲ. ಮಾರ್ಗದ ವ್ಯತ್ಯಾಸ ಅರ್ಥಮಾಡಿಕೊಳ್ಳದ ಹೊರತು ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಗೆಲುವು ಸಿಗದು’ ಎಂದರು.

ADVERTISEMENT

ಈಚಿನ ದಿನಗಳಲ್ಲಿ ಸಮಾಜದಲ್ಲಿ ವೃತ್ತಿಪರತೆಯೂ ಕಡಿಮೆಯಾಗುತ್ತಿದೆ. ಇದು ಯಾವುದೇ ವೃತ್ತಿಗೂ ಅನ್ವಯಿಸುತ್ತದೆ. ಧನದಾಹಿ ಹೆಚ್ಚಾಗಿದೆ. ಈ ಓಟದಲ್ಲಿ ಯಾವ ನಿಯಮವೂ ಅನ್ವಯಿಸುತ್ತಿಲ್ಲ. ಅಧಿಕಾರಶಾಹಿ ಹಾಗೂ ರಾಜಕಾರಣಿಗಳಲ್ಲಿ ಮಾತ್ರ ಭ್ರಷ್ಟಾಚಾರ ಇದೆ ಎಂದರೆ ಅದು ಸುಳ್ಳು ಎಂದು ವಿಶ್ಲೇಷಿಸಿದರು.

‘ನಮ್ಮ ದೇಶದಲ್ಲಿ ಕಡಿಮೆ ಜನಸಂಖ್ಯೆಯಿದ್ದು, ಕಡಿಮೆ ಭ್ರಷ್ಟಾಚಾರವಿದ್ದಿದ್ದರೆ ಬಡತನ ಕಡಿಮೆ ಇರುತ್ತಿತ್ತು. ಭಾರತೀಯರ ಕಣ್ಣೀರಿನ ಪ್ರಮಾಣವೂ ಕಡಿಮೆ ಇರುತ್ತಿತ್ತು’ ಎಂದು ಅವರು ಬೇಸರದಿಂದ ಹೇಳಿದರು.

ವಿಜ್ಞಾನವೂ ನಿಷ್ಪ್ರಯೋಜಕ: ‘ಜನರು ಹಸಿವಿನಿಂದ ಇನ್ನೂ ಬಳಲುತ್ತಿದ್ದಾರೆ ಎಂದರೆ ನಾವು ವೈಜ್ಞಾನಿಕ ಕ್ಷೇತ್ರದಲ್ಲಿ, ಪರಮಾಣು ವಲಯದಲ್ಲಿ ಮಾಡಿರುವ ಸಾಧನೆಯ ಪ್ರಯೋಜನವೇನು? ಬಡತನ ನಿವಾರಣೆ, ವ್ಯಕ್ತಿಯ ಮೂಲಭೂತ ಅಗತ್ಯಗಳ ಪೂರೈಕೆಗಳೇ ನಮ್ಮ ಆದ್ಯತೆಯಾಗಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ದೇಶದ ಭವಿಷ್ಯ ಕಟ್ಟುವ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಘಟಿಕೋತ್ಸವದಲ್ಲಿ ಒಟ್ಟು 27,502 ಪದವಿ ಪ್ರದಾನ ಮಾಡಲಾಯಿತು. 575 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ ನೀಡಲಾಯಿತು. ಪದವಿ ಪಡೆದ ಅಭ್ಯರ್ಥಿಗಳ ಪೈಕಿ ಮಹಿಳೆಯರದ್ದೇ ಸಿಂಹಪಾಲು. ಒಟ್ಟು ಶೇ 62ರಷ್ಟು ಮಹಿಳೆಯರು ಪದವೀಧರರಾದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿಯಾಗಿರಲಿಲ್ಲ. ಮುಂಚಿತವಾಗಿಯೇ ಘಟಿಕೋತ್ಸವದಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದರು. ಕುಲಸಚಿವೆ ಡಿ.ಭಾರತಿ ಭಾಗವಹಿಸಿದ್ದರು. ಪ್ರಭಾರಿ ಕುಲಪತಿ ಪ್ರೊ.ಸಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.