ADVERTISEMENT

ಹಾನಿ: ರೈತರಿಗೆ ಅನ್ಯಾಯ; ಅಧಿಕಾರಿಗಳೇ ಹೊಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 9:29 IST
Last Updated 9 ಜನವರಿ 2014, 9:29 IST

ಅರಕಲಗೂಡು: ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಸಂಭವಿಸಿರುವ ಹಾನಿ ಕುರಿತು ಸರಿಯಾದ ವರದಿ ಸಲ್ಲಿಸದ ಕಾರಣ ರೈತರಿಗೆ ಅನ್ಯಾಯಾವಾಗಿದ್ದು, ಇದಕ್ಕೆ ಅಧಿಕಾರಿಗಳೇ ಹೊಣೆ ಎಂದು ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಂಚಾಯತಿ ಸಾಮಾನ್ಯಸಭೆಯು ಅಧ್ಯಕ್ಷೆ ಕಾಮಾಕ್ಷಮ್ಮ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸದಸ್ಯ ಸಂತೋಷ್ ಗೌಡ ಮಾತನಾಡಿ ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ರೈತರು ಬೆಳೆದಿದ್ದ ಬೆಳೆಗಳು ಸಂಪೂರ್ಣ ಹಾಳಾಗಿದೆ. ಪ್ರಮುಖ ವಾಣಿಜ್ಯ ಬೆಳೆಗಳು ನಾಶವಾದ ಕಾರಣ ರೈತರು ಆರ್ಥಿಕವಾಗಿ  ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ, ಕಂದಾಯ ಮತ್ತು ಕೃಷಿ ಇಲಾಖೆಗಳು ನಷ್ಟದ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ಅಂದಾಜು ಮಾಡಿ ವರದಿ ನೀಡಿಲ್ಲ, ಹಾನಿ ಸಂಭವಿಸಿದ ಪ್ರದೇಶಕ್ಕೆ ತೆರಳಿ ಸಮೀಕ್ಷೆ ನಡೆಸಬೇಕಿದ್ದ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ವರದಿ ನೀಡಿದ್ದಾರೆ. ಸರ್ಕಾರದಿಂದ ಈವರೆಗೂ ಪರಿಹಾರಧನ ಬಿಡುಗಡೆಯಾಗಿಲ್ಲ, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ಮರಳು ದಂಧೆಕೋರರು ಕೇರಳಾ ಪುರ ಗ್ರಾಮದ ಕಾವೇರಿ ನದಿ ತಟದಲ್ಲಿ ಹೂತಿದ್ದ ಶವಗಳ  ಮೂಳೆಗಳನ್ನು ತೆಗೆದು ರಾಶಿ ಹಾಕಿದ್ದಾರೆ ಇಂತಹ ಹೀನಕೃತ್ಯ ನಡೆಯುತ್ತಿರುವ ಕುರಿತು ದೂರು ನೀಡಿದರೂ ಕ್ರಮ ಜರುಗಿಸಿಲ್ಲ  ಎಂದು ಸದಸ್ಯ ಸಂತೋಷ್ ಗೌಡ ಆಪಾದಿಸಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷೆ ಸಾಕಮ್ಮ, ಐಎಎಸ್ ತರಬೇತಿ ಅಧಿಕಾರಿ ರಾಮಚಂದ್ರನ್‍, ಶಿವರಾಮ್‍, ಜಿಲ್ಲಾಪಂಚಾಯತಿ ಸದಸ್ಯರಾದ ಪಾರ್ವತಮ್ಮ, ನಾಗಮಣಿ, ಭಾಗ್ಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.