ADVERTISEMENT

ಹೂ ಬಿಟ್ಟ ಕಬ್ಬು; ಇಳುವರಿ ಕುಸಿತದ ಭೀತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:34 IST
Last Updated 4 ಡಿಸೆಂಬರ್ 2012, 6:34 IST

ಮಂಡ್ಯ: ಜಿಲ್ಲೆಯಾದ್ಯಂತ ಬೆಳೆದಿರುವ ಬಹುತೇಕ ಕಬ್ಬಿನ ಬೆಳೆ ಹೂ ಬಿಟ್ಟಿದ್ದು, ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ.
ಜಿಲ್ಲೆಯ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ಮುಂತಾದ ತಾಲ್ಲೂಕುಗಳಲ್ಲಿ ಬೆಳೆದು ನಿಂತಿರುವ ಐದಾರು ತಿಂಗಳ ಕಬ್ಬಿನ ಬೆಳೆ ಹೂ ಬಿಟ್ಟಿದೆ.

ಕಬ್ಬಿನ ಬೆಳೆ ಹೂ ಬಿಟ್ಟರೆ, ಬೆಳವಣಿಗೆ ತೀವ್ರತರನಾಗಿ ಕುಂಠಿತವಾಗುತ್ತದೆ. ಕಬ್ಬಿನ ಬೆಳವಣಿಗೆಯಲ್ಲಿ ಕುಂಠಿತವಾಗುವುದರ ಪರಿಣಾಮ ಇಳುವರಿಯಲ್ಲಿಯೂ ಕಂಡು ಬರುತ್ತದೆ.

ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. 10 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿನ ಕಬ್ಬಿನ ಬೆಳೆ ಹೂ ಬಿಟ್ಟಿದೆ.
ಕಬ್ಬಿನ ಬಹುತೇಕ ತಳಿಗಳು ಹೂ ಬಿಡುತ್ತವೆ. ಕಬ್ಬಿನ ನಾಟಿಯಲ್ಲಿ ವಿಳಂಬವಾದರೆ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಹೂ ಬಿಡುವುದು ಸಾಮಾನ್ಯ.

ಜೂನ್ ತಿಂಗಳಿನಲ್ಲಿ ಕಬ್ಬಿನ ನಾಟಿ ಮಾಡಿದರೆ ಇಂಥ ತೊಂದರೆ ಎದುರಾಗುವುದಿಲ್ಲ. ಸ್ವಲ್ಪ ವಿಳಂಬವಾದರೇ ಹೂ ಬಿಡುತ್ತದೆ. ಜೂನ್‌ನಲ್ಲಿ ನಾಟಿ ಮಾಡಿದರೆ ನವೆಂಬರ್ ವೇಳೆಗೆ ಕಟಾವು ಮಾಡುವುದರಿಂದ ಹೂ ಬಿಡುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ ವಿ.ಸಿ. ಫಾರ್ಮ್‌ನ ಕಬ್ಬು ಬೆಳೆ ತಜ್ಞ ಡಾ.ಸ್ವಾಮಿಗೌಡ. ಕಬ್ಬಿನ ಬೆಳೆಗೆ ನೀರಿನ ತೊಂದರೆ ಎದುರಿಸುತ್ತಿರುವಾಗಲೇ, ಕಬ್ಬಿನ ಬೆಳೆ ಹೂ ಬಿಟ್ಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.