ADVERTISEMENT

ಹೇಳುತ್ತೇವೆ, ಕೇಳುತ್ತೀರಿ; ಕೆಲಸ ಶೂನ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:04 IST
Last Updated 18 ಡಿಸೆಂಬರ್ 2013, 5:04 IST

ಮಂಡ್ಯ: ‘ಕಳೆದ ಮೂರು ವರ್ಷಗಳಿಂದ ಸಭೆಗೆ ಬರುತ್ತೇವೆ. ನಾವೂ ಸಮಸ್ಯೆಗಳ ಬಗೆಗೆ ಹೇಳುತ್ತೇವೆ. ನೀವೂ ಕೇಳುತ್ತೀರಿ. ಆದರೆ, ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ’
ಹೀಗೆಂದು ಬಹುತೇಕ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸದಸ್ಯರಾದ ವಸಂತಾ, ಶಿವಲಿಂಗಯ್ಯ ಮತ್ತಿತರರು ಮಾತನಾಡಿ, ಬರೀ ಸಭೆಯಲ್ಲಿ ಹೇಳುವುದಾಗಿದೆ. ಒಂದು ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.

ಬಹಳಷ್ಟು ಅಧಿಕಾರಿಗಳನ್ನು ಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಭೆಗೆ ಗೈರು ಹಾಜರಾಗಿದ್ದಾರೆ. ಅಂತಹ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಪರಮೇಶ್‌ ಆಗ್ರಹಿಸಿದರು.

ಮಾಜಿ ಅಧ್ಯಕ್ಷ ಸುರೇಶ್‌ ಕಂಠಿ, ಸದಸ್ಯ ಮಂಜೇಗೌಡ ಮಾತನಾಡಿ, ಈ ಹಿಂದೆ ಯಾವುದಾದರೂ ಅಧಿಕಾರಿ ವಿರುದ್ಧ ಕ್ರಮಕೈಗೊಂಡ ಉದಾಹರಣೆ ಇದೆಯಾ? ಮೊದಲೇ ಸಭೆಯ ಬಗ್ಗೆ ತಿಳಿಸಿದ್ದರೂ ಯಾಕೆ ಗೈರು ಹಾಜರಾಗುತ್ತಾರೆ. ಇದು ಸಿಇಒ ಅವರ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಇದಕ್ಕೆ ಶಿವಲಿಂಗಯ್ಯ, ಮರೀಗೌಡ ಧ್ವನಿಗೂಡಿಸಿದರು.

ಸದಸ್ಯ ಶಂಕರಗೌಡ, ಮಾದಪ್ಪ ಮಾತನಾಡಿ, ಎರಡು ತಿಂಗಳಿಗೊಮ್ಮೆ ಸಭೆ ಕರೆಯಬೇಕು ಎಂದಿದೆ. ಯಾಕೆ ಕರೆಯುವುದಿಲ್ಲ ಎಂದು ಅಧ್ಯಕ್ಷರನ್ನೇ ತರಾಟೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಸಭೆ ನಡೆಸಲಾಗುವುದು ಎಂದರು.

ಪ್ರತಿಪಕ್ಷ ನಾಯಕ ಬಸವರಾಜು ಮಾತನಾಡಿ, ಸರ್ಕಾರಕ್ಕೂ ಸಭೆಯ ನಡಾವಳಿಯನ್ನು ಕಳುಹಿಸಿಕೊಟ್ಟಿಲ್ಲ. ಸರ್ಕಾರವೂ ನಿಮಗೆ ಲೆಕ್ಕಕ್ಕೆ ಇಲ್ಲದಂತಾಗಿದೆ. ನಿರ್ಮಲ ಅಭಿಯಾನಕ್ಕೆ ಬಂದಿದ್ದ ಎಂಟು ಕೋಟಿ ರೂಪಾಯಿ ವಾಪಸ್‌ ಹೋಗಿದೆ ಎಂದರು.
ಸಿಇಒ ಜಯಣ್ಣ ಮಾತನಾಡಿ, ಹೆಚ್ಚುವರಿಯಾಗಿ ಹಣ ಬಿಡುಗಡೆಯಾಗಿತ್ತು ಎಂದರು.

ಆಗ ಕೂಡಲೇ ಮಧ್ಯ ಪ್ರವೇಶಿಸಿದ ಸುರೇಶ್‌್ ಕಂಠಿ, ನಿರ್ಮಲ ಭಾರತ ಅಭಿಯಾನದ ಪ್ರಗತಿಯ ಬಗೆಗೆ ಸಭೆಗೆ ಮಾಹಿತಿ ನೀಡಿ. ನೈರ್ಮಲ್ಯ ಮಳಿಗೆಯನ್ನು ಯಾರು ನಿರ್ಮಿಸಿಕೊಂಡಿದ್ದಾರೆ ತಿಳಿಸಬೇಕು ಎಂದು ಆಗ್ರಹಿಸಿದರು.

ಜಯಣ್ಣ ಮಾತನಾಡಿ, ಮುಂದಿನ ಸಭೆಯೊಳಗೆ ಸದಸ್ಯರಿಗೆ ಸಂಪೂರ್ಣ ಮಾಹಿತಿ ಒದಗಿಸಲಾಗುವುದು ಎಂದರು.
ಪ್ರತಿಪಕ್ಷ ನಾಯಕ ಬಸವರಾಜು, ಮಾದಪ್ಪ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಬೂಕನಕೆರೆಯಲ್ಲಿ ಪ್ರೌಢಶಾಲಾ ಕಟ್ಟಡವನ್ನು 2011ರಲ್ಲಿ ಆರಂಭಿ ಸಿದ್ದರೂ, ಇಂದಿಗೂ ಪೂರ್ಣಗೊಂಡಿಲ್ಲ. ಕಾಮಗಾರಿಯೂ ಕಳಪೆಯಾಗಿದೆ ಎಂದು ಮಹಿಳಾ ಸದಸ್ಯೆ ದೂರಿದರು.

ಶಂಕರಗೌಡ ಮಾತನಾಡಿ, ಮರಳು ದೊರೆಯದ್ದರಿಂದ ಕಟ್ಟಡ ಕಾಮಗಾರಿಗೆ ಕಲ್ಲಿನ ವೇಸ್ಟ್‌ ಪುಡಿ (ರೊಬೊ ಸ್ಯಾಂಡ್‌) ಬಳಸಿಕೊಳ್ಳಲಾಗುತ್ತಿದೆ ಎಂದರು.

ಅಂತಹ ಕಾಮಗಾರಿಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್‌ ಸೂಚಿಸಿದರು.
ಮಾಜಿ ಅಧ್ಯಕ್ಷ ಕುಮಾರ್‌ ಮಾತನಾಡಿ, ಅರಹಳ್ಳಿ ಹಾಗೂ ಸಿಂಧಘಟ್ಟದಲ್ಲಿ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿಲ್ಲ. ವಿದ್ಯುತ್‌ ಸಂಪರ್ಕ ನೀಡುವ ಕೆಲಸ ಆಗಿಲ್ಲ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌್ ವಿಭಾಗದ ಚನ್ನಯ್ಯ ಮಾತನಾಡಿ, ಸಿವಿಲ್‌್ ಗುತ್ತಿಗೆದಾರರಿಗೇ ವಿದ್ಯುತ್‌ ಕಾಮಗಾರಿಯನ್ನೂ ಮಾಡಲು ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.