ADVERTISEMENT

‘ಕೃಷಿಯಲ್ಲಿ ರಾಸಾಯನಿಕ ಬಳಕೆ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 6:32 IST
Last Updated 24 ಮಾರ್ಚ್ 2014, 6:32 IST

ಶ್ರೀರಂಗಪಟ್ಟಣ: ರಸಗೊಬ್ಬರ ಹಾಗೂ ಕೀಟನಾಶಕ ಬಳಸದೆ ಕೃಷಿ ಮಾಡುವುದರಿಂದ ನಿರೀಕ್ಷಿತ ಇಳುವರಿ ಪಡೆಯುವುದು ಸಾಧ್ಯವಾಗದೇ ಇರುವುದರಿಂದ ಆಹಾರ ಕ್ಷೇತ್ರದಲ್ಲಿ ಸಮೃದ್ಧಿ ಕಷ್ಟಸಾಧ್ಯ ಎಂದು ಕೃಷಿ ವಿಜ್ಞಾನಿ ಡಾ.ವಸಂತಕುಮಾರ್‌ ತಿಮಕಾಪುರ್‌ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಪರಿಷತ್‌, ಸರ್ಕಾರಿ ಐಟಿಐ ಕಾಲೇಜು ಹಾಗೂ ಜನಮನ ಸಾಂಸ್ಕೃತಿಕ ಪ್ರತಿಷ್ಠಾನ ಶುಕ್ರವಾರ ಏರ್ಪಡಿಸಿದ್ದ ‘ಜನರೆಡೆಗೆ ವಿಜ್ಞಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾವಯವ ಕೃಷಿ ಹೆಸರಿನಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಯ ವಿರೋಧ ಸರಿಯಲ್ಲ. ಕೃಷಿ ಕ್ಷೇತ್ರದಲ್ಲಿ ಹೊಸ ತಳಿಗಳ ಅಭಿವೃದ್ಧಿ, ರಸಗೊಬ್ಬರ ಹಾಗೂ ಪೀಡೆ ನಿವಾರಣೆಗೆ ಕೀಟನಾಶಕ ಬಳಕೆ ಅನಿವಾರ್ಯ.  ಮೆಕ್ಸಿಕೋದ ಡಾ.ನಾರ್ಮನ್‌ ಬೋರ್ಲಾಗ್‌, ನಮ್ಮದೇ ದೇಶದ ಡಾ.ಸ್ವಾಮಿನಾಥನ್‌ ಇತರರು ಉತ್ತಮ ಇಳುವರಿಯ ತಳಿಗಳನ್ನು ಪರಿಚಯಿಸಿದ್ದಾರೆ.

ಇದರಿಂದ ಗೋಧಿ, ಜೋಳ, ಬತ್ತ ಹಾಗೂ ದ್ವಿದಳ ಧಾನ್ಯಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅಗತ್ಯ ಆಹಾರ ಪೂರೈಸಲು ಸಂಶೋಧನೆ, ರಾಸಾಯನಿಕ ಬಳಕೆಯ ಅಗತ್ಯವಿದೆ ಎಂದು ಅವರು ತಿಳಿಸಿದರು.

ಶಿಕ್ಷಕ– ಶಿಕ್ಷಕೇತರರ ಸಂಘದ ರಾಜ್ಯ ಅಧ್ಯಕ್ಷ ಎನ್‌.ಕೆ. ನಂಜಪ್ಪಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೌಢ್ಯ ಆಚರಣೆ ನಿಯಂತ್ರಿಸಬೇಕಾದರೆ ಜನರಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕು.

ಶಾಲೆ, ಕಾಲೇಜು ಹಂತದಲ್ಲಿ ಈ ಪ್ರಕ್ರಿಯೆ ನಡೆಸಬೇಕು. ಏನು? ಹೇಗೆ? ಏಕೆ? ಎಂಬ ಪ್ರಶ್ನೆಗಳು ಮೂಡುವಂತೆ ಪ್ರೇರೇಪಿಸಬೇಕು ಎಂದರು.
ವಿಜ್ಞಾನ ಪರಿಷತ್‌ ಜಿಲ್ಲಾ ಘಟಕ ಅಧ್ಯಕ್ಷ ಸಿ. ಪುಟ್ಟಸ್ವಾಮಿ ಮಾತನಾಡಿದರು.

ಪ್ರಾಂಶುಪಾಲ ಎ. ಸಯ್ಯದ್‌ ಅಮಾನುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಲಿಂಗು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್‌, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌. ಸೋಮಣ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.