ADVERTISEMENT

‘ತಂತ್ರಜ್ಞಾನ ವರವೂ ಹೌದು, ಶಾಪವೂ ಹೌದು’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 4:00 IST
Last Updated 13 ಡಿಸೆಂಬರ್ 2013, 4:00 IST

ಪಾಂಡವಪುರ: ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಗಳಿಂದ  ಮನುಷ್ಯನಿಗೆ ವರವಾಗಿ ಪರಿಣಮಿಸಿದರೂ ಕೂಡ ಅಷ್ಟೇ ಶಾಪವಾಗಿ ಪರಿಣಮಿಸಿವೆ ಎಂಬ ಅಭಿಪ್ರಾಯಗಳು ಕವಿಗೋಷ್ಠಿಯಲ್ಲಿ ವ್ಯಕ್ತವಾದವು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿಜ್ಞಾನ ಕೇಂದ್ರಗಳು ಸಂಯುಕ್ತವಾಗಿ ಗುರುವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ‘ವಿಜ್ಞಾನ ಕವನ ವಾಚನ ಗೋಷ್ಠಿ’ಯಲ್ಲಿ ಭಾಗವಹಿಸಿದ್ದ ಕವಿಗಳ ಸ್ವರಚಿತ ಕವನ ವಾಚನದಲ್ಲಿ ಅಭಿಪ್ರಾಯಗಳು ಮೂಡಿಬಂದವು.

ಖಗೋಳಶಾಸ್ತ್ರದಲ್ಲಿ ಸಾಧನೆ ಮಾಡಿದ್ದರೂ ಕೂಡ ಖಗೋಳ ವಿಜ್ಞಾನಿ ಕಲ್ಪನಾ ಚಾವ್ಲಾಳನ್ನು ಅದೇ ವಿಜ್ಞಾನ ಬಲಿ ತೆಗೆದುಕೊಂಡಿತು ಎಂದು ಕದಲಗೆರೆ ಜಯರಾಮ್ ಅವರ ಓ ವಿಜ್ಞಾನವೆ ಕವನದಲ್ಲಿ ಮೂಡಿಬಂದಿತು. ಆದಿಚುಂಚನಗಿರಿ ರಾಮಚಂದ್ರು ಅವರ ‘ಮಹಾಮಾರಿ ಡೆಂಗೆ’ ಕವನವು ರೋಗ ನಿರೋಧಕಗಳ ಔಷಧಿಗಳನ್ನು ಕಂಡು ಹಿಡಿಯುತ್ತಿದ್ದರು ಡೆಂಗೆ ಜ್ವರದಂತಹ ಹೊಸ ಹೊಸ ರೋಗಗಳು ಹುಟ್ಟಿಕೊಂಡು ಮನುಷ್ಯನಿಗೆ ಸವಾಲಾಗಿವೆ ಪರಿಣಮಿಸಿವೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಲಕ್ಷ್ಮೇಗೌಡ ಅವರ ‘ಮೊಬೈಲ್’ ಕವಿತೆಯು ಆಧುನಿಕ ತಂತ್ರಜ್ಞಾನದ ಮೊಬೈಲ್ ತಂದೊಡ್ಡಿರುವ ಅವಾಂತರಗಳನ್ನು ವಿವರಿಸಿತು. ವಿದ್ಯಾರ್ಥಿ ಮನೋಜ್ ಕುಮಾರ್ ಮಳವಳ್ಳಿಯ ಅವರ ‘ವಾಮಾಚಾರ’ ಕವಿತೆಯಲ್ಲಿ ದೃಶ್ಯಮಾಧ್ಯಮಗಳು ನಿತ್ಯ ಭಿತ್ತರವಾಗುತ್ತಿರುವ ಮೂಢನಂಬಿಕೆಗಳು ಜನರಲ್ಲಿ ಅಜ್ಞಾನವನ್ನು ಬೆಳೆಸುತ್ತಿವೆ ಎಂಬ ಅಭಿಪ್ರಾಯ ಮೂಡಿಬಂದಿತು.

ಭೂಮಿಯೊಳಗಿನ ಅಂತರ್ಜಲವನ್ನು ಮಿತವಾಗಿ ಬಳಸದಿದ್ದರೆ ಜೀವಜಲ ಬತ್ತಿಹೋಗಲಿದೆ ಎಂದು ಶಿಕ್ಷಕ ಎನ್. ಮಹಾದೇವಪ್ಪ ಅವರ ‘ಎಚ್ಚರ, ಎಚ್ಚರ’ ಕವನ ಜಾಗೃತಿ ಮೂಡಿಸಿತು. ಪ್ರಕೃತಿ ನಿಯಮದ ವಿರುದ್ದ ಮನುಷ್ಯ ಈಜಬಾರದು. ಆದರೆ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಾಳುಮಾಡುತ್ತಿದ್ದಾನೆ. ಇರುವದೊಂದ ಭೂಮಿಯನ್ನು ಹಾಳು ಮಾಡಬೇಡ ‘ಪಾಪಿ ಮಾನವ‘ ಎಂಬ ಸಿ.ಎಸ್. ಭಾಸ್ಕರ್ ಅವರ ಕವನ ಚಿಂತೆಗೆ ಹಚ್ಚಿತು. ಆಧುನಿಕ ಆಡಂಬರದ ನಗರೀಕರಣದಲ್ಲಿ ಪರಿಸರ ನಾಶವಾಗುತ್ತಿರುವುದನ್ನು ಮಂಡ್ಯದ ಅಭಿನಂದನ್ ಅವರ ಕವನ ‘ ಮಾಲಿನ್ಯ’ ದಿಂದ ಮೂಡಿಬಂದಿತು.

ಶಿಕ್ಷಕಿ ಮಂಜುಳ ಅವರ ‘ಸೊನ್ನೆ’ ಎಂಬ ಕವಿತೆಯು ವಿಜ್ಞಾನದಲ್ಲಿ ಗಣಿತದ ಪಾತ್ರ ಪ್ರಮುಖವಾಗಿರುವಂತೆ ಸೊನ್ನೆ ಯಿಂದ ಎಲ್ಲದರ ಸೃಷ್ಟಿ ಸೊನ್ನೆ ಇಲ್ಲದಿದ್ದರೆ ಎಲ್ಲವೂ ಶೂನ್ಯ ಎಂಬುದನ್ನು ತೋರಿಸಿಕೊಟ್ಟಿತು.

ಡಾ.ಶೇಖರ್, ನಾರೈತ ನಾಗತಿಹಳ್ಳಿ, ಸುಜಯ್, ಮಹಾಲಿಂಗಯ್ಯ, ಶಿವಣ್ಣೇಗೌಡ, ಉಮೇಶ್, ಡಾ.ಪರ್ವೀನ್, ಮೊಹಮದ್ ಸುಹೇಲ್, ಹರಳಹಳ್ಳಿ ಪುಟ್ಟರಾಜು,  ಸಲೀಂ ಕವನಗಳು ಮೆಚ್ಚುಗೆಗೆ ಪಾತ್ರವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.