ADVERTISEMENT

‘ಸಮಾನತೆ ಸಂವಿಧಾನದ ಜೀವದ್ರವ್ಯ’

ಜಿಲ್ಲೆಯ ವಿವಿಧೆಡೆ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:37 IST
Last Updated 7 ಡಿಸೆಂಬರ್ 2013, 8:37 IST
ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಜೈ ಭೀಮ್ ಜಾಗೃತಿ ಬಳಗವು ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ತಹಶೀಲ್ದಾರ್‌ ಶಿವಣ್ಣ ಉದ್ಘಾಟಿಸಿದರು. ಶಿರಸ್ತೇದಾರ್‌ ಶಿವಲಿಂಗಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಅನಂತರಾಜು, ಸಿಪಿಐ ವಸಂತಕುಮಾರ್ ಇದ್ದಾರೆ.
ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಜೈ ಭೀಮ್ ಜಾಗೃತಿ ಬಳಗವು ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ತಹಶೀಲ್ದಾರ್‌ ಶಿವಣ್ಣ ಉದ್ಘಾಟಿಸಿದರು. ಶಿರಸ್ತೇದಾರ್‌ ಶಿವಲಿಂಗಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಅನಂತರಾಜು, ಸಿಪಿಐ ವಸಂತಕುಮಾರ್ ಇದ್ದಾರೆ.   

ಮಂಡ್ಯ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣ­ವಾಗಿ ಆಚರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ­ಲ್ಲಿರುವ ಕಾವೇರಿ ಉದ್ಯಾನದಲ್ಲಿ ಶುಕ್ರವಾರ ಬೆಳಿಗ್ಗೆ ಅಂಬೇಡ್ಕರ್‌ ಪ್ರತಿಮೆಗೆ ಹಾರ ಹಾಕುವ ಮೂಲಕ ಗೌರವ ಅರ್ಪಿಸಲಾಯಿತು.

ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಹಾಗೂ ಜೀವನಧಾರೆ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠ ಭೂಷಣ ಬೊರಸೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಇ.ವಿ. ವೆಂಕಟರಮಣರೆಡ್ಡಿ ಸೇರಿದಂತೆ 63 ಜನರು ರಕ್ತದಾನ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮ ದಲ್ಲಿ ಚಿಂತನ ಸಾಂಸ್ಕೃತಿಕ ಟ್ರಸ್ಟ್‌ ಕಲಾವಿದರು ಹಾಡಿದರು.

ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ, ಜಿ.ಪಂ. ಸಿಇಒ ಪಿ.ಸಿ. ಜಯಣ್ಣ, ಮುಖಂಡರಾದ ಗುರು­ಪ್ರಸಾದ್‌ ಕೆರಗೋಡು, ಎಂ.ಬಿ. ಶ್ರೀನಿವಾಸ್‌, ವೆಂಕಟಗಿರಿಯಯ್ಯ, ಕೆರಗೋಡು, ಕೃಷ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮದ್ದೂರು ವರದಿ: ದಲಿತರು ಆರ್ಥಿಕವಾಗಿ, ರಾಜಕೀಯ ವಾಗಿ ಸಬಲರಾದರೂ ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆಯ ಅಪಮಾನದ ಬೇಗುದಿಯಿಂದ ಹೊರ ಬಂದಿಲ್ಲ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ಅಂಬೇಡ್ಕರ್‌ ರಚಿಸಿದ ಸಂವಿಧಾನ ಇಂದಿಗೂ ಪರಿಪೂರ್ಣವಾಗಿ ಅನುಷ್ಠಾನ ಗೊಂಡಿಲ್ಲ. ಹೀಗಾಗಿ ದಲಿತರ ಬದುಕು ಇಂದಿಗೂ ಹಸನುಗೊಂಡಿಲ್ಲ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಚೆನ್ನ ರಾಜು ಅಧ್ಯಕ್ಷತೆ ವಹಿಸಿದ್ದರು. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ದಿಟ್ಟ ಹೋರಾಟ ನಡೆಸಿದ ಅಂಬೇಡ್ಕರ್ ತತ್ವಾದರ್ಶಗಳನ್ನು ಜೀವನದಲ್ಲಿ ಅನುಸರಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಇಂದ್ರಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯೆ ನೀಲಮ್ಮ, ಪುಟ್ಟಮಾಧು, ದಲಿತ ಮುಖಂಡರಾದ ಸಿದ್ದರಾಮಯ್ಯ, ಆತಗೂರು ನಿಂಗಯ್ಯ, ಎ. ಶಂಕರ್‌, ಬಿ.ಎಂ. ಮಧು­ಕುಮಾರ್, ತೊರೆಬೊಮ್ಮನಹಳ್ಳಿ ಮಹದೇವು, ಎಚ್‌. ಹೊಂಬಯ್ಯ, ಹುಲಿಗೆರೆಪುರ ಮಹದೇವು, ಎಸ್‌. ಅಂಬರೀಶ್, ಹುರಗಲವಾಡಿ ರಾಮಯ್ಯ, ಅಂಬರಹಳ್ಳಿಸ್ವಾಮಿ, ಮರಿದೇವರು ಇದ್ದರು.

ಮಾನವತಾವಾದವೇ ಅಂಬೇಡ್ಕರ್ ವಾದ: ಮಹೇಶ್
ನಾಗಮಂಗಲ: ಸಮಾನತೆ, ಸೋದರತೆ, ಮಾನವತಾವಾದವೇ ಅಂಬೇಡ್ಕರ್ ವಾದ. ಬಾಬಾ ಸಾಹೇಬರ ಈ ಸಿದ್ಧಾಂತವನ್ನು ಅರ್ಥೈಸಿ ಕೊಳ್ಳದೆ ನಾವು ಹಿಂದುಳಿದಿದ್ದೇವೆ ಎಂದು ಸಾಹಿತಿ ಅ.ರಾ. ಮಹೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿ ವಿಧಾನಸೌಧದ ಆವರಣ ದಲ್ಲಿ ಜೈ ಭೀಮ್ ಜಾಗೃತಿ ಬಳಗ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ­ದಲ್ಲಿ ಅಂಬೇಡ್ಕರ್ ಕುರಿತ ಹೋರಾಟದ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಲಿತರ, ಶೋಷಿತ ವರ್ಗಗಳ ಧ್ವನಿಯಾದ ಅಂಬೇಡ್ಕರ್ ಪ್ರತಿದಿನವೂ ನಮಗೆ ನೆನಪಾಗು ತ್ತಾರೆ. ಅವರ ಬದುಕೇ ನಮಗೆ ಸ್ಪೂರ್ತಿಯಾಗ ಬೇಕು. ಸುಳ್ಳು, ಮೋಸ, ವ್ಯಭಿಚಾರ ಮಾಡ­ಬಾರದು ಎಂದು ಹೇಳಿದ ಬುದ್ಧನನ್ನು ಅನುಸರಿಸಿ ದ ಅಂಬೇಡ್ಕರ್‌ ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯಬೇಕು ಎಂದರು.

ಬಹುಜನ ಸಾಹಿತಿ ಮತ್ತು ಗಾಯಕ ಹನಸೋಗೆ ಸೋಮ­ಶೇಖರ್ ಅಂಬೇಡ್ಕರ್ ಜೀವನ ಕುರಿತು ತಾವೇ ಬರೆದ ಹಲವು ಗೀತೆಗಳನ್ನು ಹಾಡುವ ಮೂಲಕ ಇತಿಹಾಸ ಮೆಲುಕು ಹಾಕುವಂತೆ ಮಾಡಿದರು.

ಕಾರ್ಯಕ್ರಮವನ್ನು ತಹಶೀಲ್ದಾರ್ ಶಿವಣ್ಣ ಉದ್ಘಾಟಿಸಿ­ದರು. ಶಿರಸ್ತೆದಾರ್‌ ಶಿವಲಿಂಗ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಅನಂತರಾಜು, ಇಒ ಚಂದ್ರಹಾಸ, ಸಿಪಿಐ ವಸಂತ ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಸಿ.ಮೋಹನ್‌ಕುಮಾರ್‌, ಬಿಎಸ್ಪಿ ಜಿಲ್ಲಾ ಘಟಕ ಅಧ್ಯಕ್ಷ ನರಸಿಂಹ­­ಮೂರ್ತಿ, ದಲಿತ ಮುಖಂಡರಾದ ಸಿ.ಬಿ. ನಂಜುಂಡಪ್ಪ, ನ್ಯಂಗನ ಹಳ್ಳಿ ಚಲುವಣ್ಣ, ಲಾಳನಕೆರೆ ಚಂದ್ರು, ಬಿದರಕೆರೆ ಮಂಜು, ತೊಳಲಿ ಕೃಷ್ಣಮೂರ್ತಿ, ಎಂ. ನಾಗ ರಾಜಯ್ಯ, ಬೆಳ್ಳೂರು ಶಿವಣ್ಣ, ರಮೇಶ್,  ಶ್ರೀನಿವಾಸ್, ವಿಜಯಾನಂದ ಇತರರು ಇದ್ದರು.

ಇದೇ ಸಂದರ್ಭದಲ್ಲಿ ನೆಲ್ಸನ್ ಮಂಡೇಲಾ ಅವರ ಆತ್ಮಕ್ಕೆ ಶಾಂತಿಕೋರಿ ಕೆಲ ನಿಮಿಷ ಮೌನಾಚರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.