ಮಂಡ್ಯ: ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣಕ್ಕೆ ಶಾಶ್ವತವಾಗಿ ಫೆಡ್‌ಲೈಟ್ ಅಳವಡಿಕೆ ಸೇರಿದಂತೆ ಅಭಿವೃದ್ಧಿಗಾಗಿ ₹1 ಕೋಟಿ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು.
ನಗರದ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಮಂಡ್ಯ ಜಿಲ್ಲಾ ಹಿರಿಯ ಬ್ಯಾಸ್ಕೆಟ್‌ಬಾಲ್ ಆಟಗಾರರ ಸ್ಮರಣಾರ್ಥ ಶುಕ್ರವಾರ ಆರಂಭವಾದ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.
‘ಈಗಿರುವ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನನ್ನ ಶಾಸಕತ್ವದ ಅವದಿಯಲ್ಲಿಯೇ ಪ್ರಯತ್ನಿಸುತ್ತೇನೆ. ಕ್ರೀಡಾಂಗಣದ ಅಭಿವೃದ್ಧಿಗಾಗಿ ಈಗಾಗಲೇ ₹2 ಕೋಟಿ ಅನುದಾನ ಕೇಳಿದ್ದಾರೆ. ಅದರಂತೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಕೆಲಸ ಆರಂಭವಾದ ನಂತರ ಮತ್ತೊಂದು ₹1 ಕೋಟಿ ಬಿಡುಗಡೆ ಮಾಡಿಸುತ್ತೇನೆ’ ಎಂದು ತಿಳಿಸಿದರು.
‘ಸರ್ ಎಂ.ವಿ.ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಆಟ ನಡೆಸುವ ಉದ್ದೇಶದಿಂದ ₹3 ಕೋಟಿ ವೆಚ್ಚದಲ್ಲಿ ಫೆಡ್‌ಲೈಟ್ ಹಾಕಿಸಬೇಕಿದೆ ಎನ್ನುವುದನ್ನು ಕ್ರೀಡಾಭಿಮಾನಿಗಳು ಮತ್ತು ಅಧಿಕಾರಿಗಳು ಮಾಹಿತಿ ನೀಡಿದ್ದು, ಅದರಂತೆ ಕೆಲಸ ಆರಂಭವಾಗಿದೆ. ಇಲ್ಲಿಯೂ ಸಹ ಅನುದಾನ ಕೊರತೆ ಆಗದಂತೆ ಹಾಗೂ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡದ ಹಾಗೆ ಕೆಲಸ ಮಾಡಿಸಿ ಕೊಡುತ್ತೇನೆ’ ಎಂದರು.
ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಟಾಪ್‌ಟೆನ್ ರಾಜ್ಯದಲ್ಲಿನ ಹತ್ತು ಜಿಲ್ಲೆಗಳ ಬ್ಯಾಸ್ಕೆಟ್‌ಬಾಲ್ ತಂಡಗಳ ಮಹಿಳಾ ಮತ್ತು ಪುರುಷ ಆಟಗಾರರು ಆಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿದರು. ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಸದಸ್ಯ ಶಿವಪ್ರಕಾಶ್, ಮಾಜಿ ಸದಸ್ಯ ಮಹೇಶ್, ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್. ಸತ್ಯಾನಂದ, ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಮಾಜಿ ಆಟಗಾರ್ತಿ ಪುಷ್ಪಾ ಪುಟ್ಟಣ್ಣ, ಮುಖಂಡರಾದ ಚಿದಂಬರ್, ಅಭಿಲಾಷ್, ಕ್ರೀಡಾಪಟುಗಳಾದ ಶ್ರೀನಿವಾಸ್, ವಿಜಯ್‌ಕುಮಾರ್, ಸತ್ಯ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.