ADVERTISEMENT

ನಾಗಮಂಗಲ: ಚಿರತೆ ದಾಳಿ– 10 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 16:45 IST
Last Updated 6 ಮಾರ್ಚ್ 2021, 16:45 IST
ಚಿರತೆ ದಾಳಿಗೆ ಬಲಿಯಾದ ಕುರಿಗಳೊಂದಿಗೆ ಮಾಲೀಕ ಶಂಕರ್
ಚಿರತೆ ದಾಳಿಗೆ ಬಲಿಯಾದ ಕುರಿಗಳೊಂದಿಗೆ ಮಾಲೀಕ ಶಂಕರ್   

ನಾಗಮಂಗಲ: ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಕುರಿಗಳ ಮೇಲೆ ರಾತ್ರಿ ಸಮಯದಲ್ಲಿ ಚಿರತೆ ದಾಳಿ ಮಾಡಿದ್ದು, 10 ಕುರಿಗಳನ್ನು ಕೊಂದು ಹಾಕಿದೆ.

ತಾಲ್ಲೂಕಿನ ಹೊಣಕೆರೆ ಹೋಬಳಿಯ ಬಿ.ಶೆಟ್ಟಹಳ್ಳಿ ಗ್ರಾಮದ ರೈತ ಶಂಕರ್ ಮನೆಯ ಬಳಿಯಿದ್ದ ಕೊಟ್ಟಿಗೆಯಲ್ಲಿ ಶುಕ್ರವಾರ ರಾತ್ರಿ ಎಂದಿನಂತೆ ಕುರಿಗಳನ್ನು ಕಟ್ಟಿದ್ದರು. ಬೆಳಗಿನ ಜಾವ 4 ಗಂಟೆ ಸಮಯಕ್ಕೆ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದೆ. ಅದೇ ಸಮಯದಲ್ಲಿ ಮನೆಯ ಬಳಿಯಿದ್ದ ನಾಯಿ ಬೊಗಳುವುದನ್ನು ಕಂಡು ಶಂಕರ್ ಅವರ ಪತ್ನಿ ಬಂದು ಕೊಟ್ಟಿಗೆ ನೋಡಿ ಕಿರುಚಾಡಿದ ನಂತರ ಗ್ರಾಮಸ್ಥರು ಸೇರುವಷ್ಟರಲ್ಲಿ ಚಿರತೆ ಕೊಟ್ಟಿಗೆಯಲ್ಲಿ ಕಟ್ಟಿದ್ದ 25 ಕುರಿಗಳ ಪೈಕಿ 10 ಕುರಿಗಳ ಮೇಲೆ ದಾಳಿ ಮಾಡಿದೆ.

ಗ್ರಾಮಸ್ಥರು‌ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ADVERTISEMENT

ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಮಾತನಾಡಿ, ರೈತನಿಗೆ ಸಿಗ ಬೇಕಾದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಘಟನೆ ಸಂಬಂಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.