ADVERTISEMENT

32ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 7:58 IST
Last Updated 24 ಜೂನ್ 2013, 7:58 IST

ಶ್ರೀರಂಗಪಟ್ಟಣ: ತಾಲ್ಲೂಕು ಗೆಂಡೆಹೊಸಹಳ್ಳಿ ಬಳಿಯ ವಿಲ್ಸನ್ ಡಿಸ್ಟಿಲರಿ ಕಾರ್ಮಿಕರು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮೇ 23ರಿಂದ ತಾಲ್ಲೂಕಿನ ಅರಕೆರೆ ನಾಡಕಚೇರಿ ಬಳಿ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದು, ಕಾರ್ಮಿಕರ ಧರಣಿ 32ನೇ ದಿನಕ್ಕೆ ಕಾಲಿಟ್ಟಿದೆ.

ಅರಕೆರೆ ನಾಡಕಚೇರಿ ಬಳಿ ಕಾರ್ಮಿಕರು ಭಾನುವಾರ ಕೂಡ ಪ್ರತಿಭಟನಾ ಧರಣಿ ನಡೆಸಿದರು. ಶಾಂತಿಯುತ ಧರಣಿ ನಡೆಸುತ್ತಿದ್ದರೂ ಡಿಸ್ಟಿಲರಿ ಮಾಲೀಕರು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಡಿಸ್ಟಿಲರಿಯ ಚರ ಆಸ್ತಿಯನ್ನು ಹರಾಜು ಹಾಕಿ ಕಾರ್ಮಿಕರಿಗೆ ವೇತನ ನೀಡುವಂತೆ ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ. ಆದರೆ ಈ ಆದೇಶವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. 15 ತಿಂಗಳ ವೇತನ, ಭವಿಷ್ಯ ನಿಧಿ, ಮೃತ ಕಾರ್ಮಿಕ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ವಿಲ್ಸನ್ ಡಿಸ್ಟಿಲರಿ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಡಿಸ್ಟಿಲರಿ ಮಾಲೀಕರು ಜೂನ್ 17ರಂದು ಕೇವಲ 3 ತಿಂಗಳ ವೇತನಕ್ಕೆ ಚೆಕ್ ನೀಡಿದ್ದಾರೆ. ಆದರೆ, ಬ್ಯಾಂಕ್ ಖಾತೆಗೆ ಅವರು ಹಣವನ್ನೇ ತುಂಬಿಲ್ಲ. ಜೂನ್ 17ರಂದು ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ವೇಳೆ ವಾರದ ಒಳಗೆ ಡಿಸ್ಟಿಲರಿಯ ಚರ ಆಸ್ತಿಯನ್ನು ಹರಾಜು ಹಾಕುವ ಭರವಸೆ ನೀಡಿದ್ದರು. ಆ ಸಂಬಂಧ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಮ್ಮ ಎಲ್ಲ ಬೇಡಿಕೆ ಈಡೇರುವವರೆಗೆ ಸಿಐಟಿಯು ನೇತೃತ್ವದಲ್ಲಿ ಧರಣಿ ಮುಂದುವರೆಸಲಿದ್ದೇವೆ ಎಂದು ಸಂಘದ ಕಾರ್ಯದರ್ಶಿ ಡಿ. ದಿನೇಶ್ ತಿಳಿಸಿದ್ದಾರೆ. ಸಿಐಟಿಯು ಜಿಲ್ಲಾ ಖಜಾಂಚಿ ಸಿ. ಕುಮಾರಿ, ಸತೀಶ್, ಸೋಮವಂಶಿ, ನವೀನ್‌ಕುಮಾರ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.