ADVERTISEMENT

4 ಗುಡಿಸಲು, ಮನೆ ಭಸ್ಮ

ಕೊದ್ಲಯ್ಯನದೊಡ್ಡಿಯಲ್ಲಿ ಬೆಂಕಿ ಅವಘಡ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2015, 5:34 IST
Last Updated 23 ಫೆಬ್ರುವರಿ 2015, 5:34 IST

ಹಲಗೂರು: ಬೆಂಕಿ ಅವಘಡದಲ್ಲಿ 4 ಗುಡಿಸಲು ಭಸ್ಮವಾಗಿದ್ದು, ಒಂದು ಸಿಮೆಂಟ್‌ ಶೀಟ್‌ ಮನೆ ಭಾಗಶಃ ಸುಟ್ಟು ಹೋಗಿರುವ ಘಟನೆ ಸಮೀಪದ ಕೊದ್ಲಯ್ಯನದೊಡ್ಡಿ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ದೇವಮ್ಮ, ಬೊಮ್ಮಯ್ಯ, ಶಿವಣ್ಣ, ಕರಿಯಯ್ಯ ಅವರ ಮಗ ಸಿದ್ಧಯ್ಯ ಎಂಬುವವರ ವಾಸದ ಗುಡಿಸಲು ಭಸ್ಮವಾಗಿವೆ. ಅಲ್ಲದೆ, ಬೊಮ್ಮಯ್ಯ ಅವರ ಮಗ ಸಿದ್ದಯ್ಯ ಅವರ ಶೀಟ್‌ ಮನೆ ಭಾಗಶಃ ಸುಟ್ಟುಹೋಗಿದೆ. ದವಸ– ಧಾನ್ಯ, ಬಟ್ಟೆ, ಪಡಿತರಚೀಟಿ, ಗುರುತಿನ ಪತ್ರ ಸೇರಿದಂತೆ ಮನೆಯಲ್ಲಿದ್ದ ಎಲ್ಲ ವಸ್ತುಗಳೂ ಬೆಂಕಿಗೆ ಆಹುತಿಯಾಗಿವೆ. ಗುಡಿಸಲುಗಳ ಮೇಲ್ಛಾವಣಿ ಸಂಪೂರ್ಣ ನಾಶವಾಗಿದ್ದು, ಗೋಡೆಗಳು ಮಾತ್ರ ಪಳೆಯುಳಿಕೆಯಂತೆ ಕಾಣುತ್ತಿವೆ. ಶೀಟ್‌ ಮನೆಯ ಕಿಟಕಿಗಳಿಗೆ ಅಳವಡಿಸಿದ ಮರದ ವಸ್ತುಗಳು, ಮನೆಯಲ್ಲಿದ್ದ ರಾಗಿಚೀಲಗಳು ಸುಟ್ಟುಹೋಗಿವೆ.

ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದಾಗ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸುವಷ್ಟರಲ್ಲಿ ಮನೆಗಳೆಲ್ಲ ಸುಟ್ಟುಹೋಗಿವೆ.

ಕೊದ್ಲಯ್ಯನದೊಡ್ಡಿಯಲ್ಲಿ ಐದಾರು ಕೂಲಿ ಕುಟುಂಬಗಳು ಮಾತ್ರ ವಾಸವಾಗಿವೆ. ಒಂದು ಹೆಂಚಿನ ಮನೆಗೆ ಮಾತ್ರ ಬೆಂಕಿ ತಗುಲಿಲ್ಲ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಶಾಸಕ ಪಿ.ಎಂ. ನರೇಂದ್ರಸ್ವಾಮಿ, ತಹಶೀಲ್ದಾರ್‌ ಶಿವಶಂಕರ್‌ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ನಾವು ಕೂಲಿ ಮಾಡಿ ಜೀವನ ಸಾಗಿಸ್ತೀವಿ. ಎಲ್ಲರೂ ಕೂಲಿಗೆ ಹೋದಾಗ ಬೆಂಕಿ ಬಿದ್ದು ಮನೆಗಳು ಬೆಂದುಹೋಗಿವೆ. ಜೊತೆಗೆ, ಒಕ್ಕಣೆ ಮಾಡಿ ಇಟ್ಟಿದ್ದ ರಾಗಿ, ಶೇಖರಿಸಿದ್ದ ದವಸ ಧಾನ್ಯಗಳು, ಮನೆ ಸಾಮಾನು, ಎಲ್ಲವೂ ಸುಟ್ಟುಹೋಗಿವೆ. ಉಟ್ಟಿದ್ದ ಬಟ್ಟೆ ಹೊರತು ಬೇರೆ ಏನೂ ಉಳಿದಿಲ್ಲ. ರಾತ್ರಿಯಿಡಿ ರಸ್ತೆಯಲ್ಲಿಯೇ ಕಾಲ ಕಳೆದಿದ್ದೇವೆ.

ಎಂಎಲ್‌ಎ ಅವರು ಪಕ್ಕದೂರಿನ ಶಾಲೆಯಲ್ಲಿ ಉಳಿದುಕೊಳ್ಳಲು ಹೇಳಿದ್ದಾರೆ. ತಹಶೀಲ್ದಾರ್‌ ಅವರು ಊಟ, ಬಟ್ಟೆ ಕೊಡಿಸ್ತೀವಿ ಅಂದಾವ್ರೆ. ನಮಗೆ ಆದಷ್ಟು ಬೇಗ ಮನೆ ಕಟ್ಟಿಸಿಕೊಡಬೇಕು’ ಎಂದು ದೇವಮ್ಮ ಮತ್ತು ಇತರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.