ADVERTISEMENT

ಪ್ರಕೃತಿ ವಿಕೋಪದಿಂದ ರೈತರಿಗೆ ₹5 ಲಕ್ಷ ಕೋಟಿ ನಷ್ಟ: ಡಾ.ಸಧಿ ಶೇಷಾದ್ರಿ

ಭಾರತೀ ಕಾಲೇಜಿನಲ್ಲಿ ವಿಚಾರ ಸಂಕಿರಣದಲ್ಲಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 13:43 IST
Last Updated 21 ಆಗಸ್ಟ್ 2024, 13:43 IST
ಭಾರತೀನಗರದ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ.ಸಧಿ ಶೇಷಾದ್ರಿ, ಪರಿಸರವಾದಿ ಸಿ.ಯತಿರಾಜ್, ಡಾ.ಎಚ್. ಮಂಜುನಾಥ್, ನೈಸರ್ಗಿಕ ಕೃಷಿ ತಜ್ಞ ಪ್ರಶಾಂತ್ ಜಯರಾಮು ಅವರನ್ನು ಅಭಿನಂದಿಸಲಾಯಿತು
ಭಾರತೀನಗರದ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ.ಸಧಿ ಶೇಷಾದ್ರಿ, ಪರಿಸರವಾದಿ ಸಿ.ಯತಿರಾಜ್, ಡಾ.ಎಚ್. ಮಂಜುನಾಥ್, ನೈಸರ್ಗಿಕ ಕೃಷಿ ತಜ್ಞ ಪ್ರಶಾಂತ್ ಜಯರಾಮು ಅವರನ್ನು ಅಭಿನಂದಿಸಲಾಯಿತು   

ಭಾರತೀನಗರ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿ ಭಾರತೀಯ ರೈತರಿಗೆ ಪ್ರತಿ ವರ್ಷ 5 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಬೆಳೆ ನಷ್ಟವಾಗುತ್ತಿದೆ ಎಂದು ಹಿರಿಯ ವಿಜ್ಞಾನಿ ಡಾ. ಸಧಿ ಶೇಷಾದ್ರಿ ತಿಳಿಸಿದರು.

ತುಮಕೂರು ಗಾಂಧೀಜಿ ಸಹಜ ಬೇಸಾಯ ಆಶ್ರಮ, ಭಾರತೀ ಶಿಕ್ಷಣ ಸಂಸ್ಥೆ, ಸಂಪೂರ್ಣ ಸಾವಯವ ಕೃಷಿಕರ ಸಂಘಗಳ ಸಹಯೋಗದಲ್ಲಿ ಇಲ್ಲಿಯ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ ಮತ್ತು ರೈತರಿಗೆ ಸಿಗಬೇಕಾದ ಮನ್ನಣೆ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವುದು ಅಭಿವೃದ್ಧಿಯ ಏಕೈಕ ಮಾನದಂಡವಾಗಬಾರದು. ಇಂತಹ ಭ್ರಮೆಯಿಂದ ಚೀನಾ ಸಾಗುತ್ತಿದೆ. ಅಮೆರಿಕಾ, ಜಪಾನ್, ಯುರೋಪ್, ರಷ್ಯಾ ಹಾಗೂ ಭಾರತ ಸೇರಿ ಇನ್ನಿತರೆ ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ 50ರಿಂದ 60 ವರ್ಷಗಳಲ್ಲಿ ಕಲ್ಲಿದ್ದಲು, ತೈಲ ಬಾವಿಗಳು, ಖನಿಜ ಸಂಪತ್ತು ಕ್ಷೀಣಿಸಿ ಮತ್ತಷ್ಟು ಅವಘಡಗಳು ಸಂಭವಿಸಲಿವೆ’ ಎಂದು ಎಚ್ಚರಿಸಿದರು.

ADVERTISEMENT

ಶಾಸಕ ಮಧು ಜಿ.ಮಾದೇಗೌಡ ಅವರು ಮಾತನಾಡಿ, ‘ಸಂಪೂರ್ಣ ಸಾವಯವ ಕೃಷಿಕರ ಸಂಘ ರೈತರಿಗೆ ಜಾಗೃತಿಯ ಜೊತೆಗೆ ಅಭಿವೃದ್ಧಿಪಡಿಸುವುದರ ಬಗ್ಗೆ ಮುಂದಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಮಂಡ್ಯ ಜಿಲ್ಲೆಯಾದ್ಯಂತ ಆಯೋಜಿಸುತ್ತಿರುವುದಕ್ಕೆ ನಮ್ಮ ಸಂಸ್ಥೆಯಿಂದ ಸಂಪೂರ್ಣ ಸಹಕಾರವಿದೆ’ ಎಂದು ಹೇಳಿದರು.

ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಮಹೇಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತುಮಕೂರಿನ ಚಿಂತಕರು ಹಾಗೂ ಪರಿಸರವಾದಿ ಸಿ.ಯತಿರಾಜ್, ಸಾವಯವ ಕೃಷಿಕ ಬಿ.ಎಂ. ನಂಜೇಗೌಡ, ಸಂಘದ ಮುಖಂಡ ಮಳವಳ್ಳಿ ಮಹೇಶ್ ಕುಮಾರ್, ತುಮಕೂರು ಗಾಂಧೀಜಿ ಸಹಜ ಬೇಸಾಯ ಆಶ್ರಮದ ಡಾ.ಎಚ್. ಮಂಜುನಾಥ್, ರವೀಶ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಿ.ಪಿ. ಮಾಧವನ್, ಕೊಳ್ಳೇಗಾಲದ ಜೆ.ಎಸ್.ಬಿ ಪ್ರತಿಷ್ಠಾನದ ಎಸ್. ಶಶಿಕುಮಾರ್, ಸತ್ತೇಗಾಲದ ಪ್ರಶಾಂತ್ ಜಯರಾಮ್, ಕೆ.ಸಿ. ವೆಂಕಟೇಶ್ ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು

ಸಭೆಯಲ್ಲಿ ಮಾಡಲಾದ ಪ್ರಮುಖ ನಿರ್ಣಯಗಳು ಸಾವಯವ ಕೃಷಿ ಸಂಬಂಧ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.