ADVERTISEMENT

ಭವಿಷ್ಯದಲ್ಲಿ ನೀರಿಗಾಗಿ ಕೋಲಾಹಲ: ಆತಂಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 5:26 IST
Last Updated 6 ಜನವರಿ 2018, 5:26 IST

ಭಾರತೀನಗರ: ಮಿತಿ ಇಲ್ಲದೇ ಅಂತರ್ಜಲ ತೆಗೆದರೆ, ಭವಿಷ್ಯದಲ್ಲಿ ಆಪತ್ತು ಕಾದಿದೆ ಎಂದು ಜಿ.ಪಂ ಸದಸ್ಯ ಎ.ಎಸ್‌.ರಾಜೀವ್‌ ಹೇಳಿದರು. ಸಮೀಪದ ಮಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರ್ಜಲ ನಿರ್ದೇಶನಾಲಯ, ಜಿಲ್ಲಾ ಅಂತರ್ಜಲ ಕಚೇರಿಯಿಂದ ಗುರುವಾರ ನಡೆದ ಅಂತರ್ಜಲ ಸದ್ಬಳಕೆ, ಸಂರಕ್ಷಣೆ ಕುರಿತ ಜನಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆರೆ–ಕಟ್ಟೆಗಳ ನಾಶದಿಂದಾಗಿ ಸಾವಿರಾರು ಅಡಿಗಳಷ್ಟು ಆಳಕ್ಕೆ ಭೂಮಿ ಕೊರೆದರೂ, ಕೆಲೆವೆಡೆ ನೀರು ದೊರೆಯುತ್ತಿಲ್ಲ. ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಈ ಕಾರಣದಿಂದ ಭವಿಷ್ಯದಲ್ಲಿ ನೀರಿಗಾಗಿ ಕೋಲಾಹಲವಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬಿಇಒ ಎಂ.ರೇಣುಕಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ‘ಹರಿಯುವ ನೀರನ್ನು ಇಂಗುವಂತೆ ಮಾಡುವುದೇ ಅಂತರ್ಜಲ ಹೆಚ್ಚಳಕ್ಕೆ ಪರಿಹಾರ. ನೀರನ್ನು ಮಿತವಾಗಿ ಬಳಸುವ, ಉಳಿಸುವ ಪ್ರತಿಜ್ಞೆಯನ್ನು ಎಲ್ಲರೂ ಕೈಗೊಳ್ಳಬೇಕು’ ಎಂದರು.

ADVERTISEMENT

ಭೂವಿಜ್ಞಾನಿ ಪ್ರಾಣೇಶ್ ರಾವ್‌ ಅವರು, ‘ಅಂತರ್ಜಲ ಸಂರಕ್ಷಣೆ, ಸದ್ಬಳಕೆ, ಅಂತರ್ಜಲ ಅನ್ವೇಷಣೆ ವಿಧಾನಗಳ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಭೂ ವಿಜ್ಞಾನಿ ಗೀತಾರಾಣಿ ಅವರು ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕಮಕ್ಕಳು ಬಿದ್ದು ಸಂಭವಿಸುವ ಅವಘಡಗಳನ್ನು ತಪ್ಪಿಸುವ ಕುರಿತು ಜಾಗೃತಿ ಮೂಡಿಸಿದರು. ರಸಾಯನವಿಜ್ಞಾನ ತಜ್ಞ ನಾಗರಾಜ್‌ ಅವರು, ಅಂತರ್ಜಲ ಗುಣಮಟ್ಟ ಕುರಿತು ಮಾತನಾಡಿದರು.

ಮೆಣಸಗೆರೆ ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ನಾಗರಾಜು ಅಂತರ್ಜಲ ಕೈಪಿಡಿ ಬಿಡುಗಡೆ ಮಾಡಿದರು. ಅಂತರ್ಜಲ ಸಂರಕ್ಷಣೆ ಕುರಿತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತು.

ಹಿರಿಯ ಭೂವಿಜ್ಞಾನಿ ಟಿ.ಅಂಬಿಕಾ, ತಾ.ಪಂ ಸದಸ್ಯ ಗಿರೀಶ, ಎಸ್‌ಡಿಎಂಸಿ ಅಧ್ಯಕ್ಷ ಎಂ. ಬಿ.ಶಿವಕುಮಾರ್‌, ಮುಖ್ಯಶಿಕ್ಷಕ ಟಿ.ಸಿ.ಜಗದೀಶ್‌, ಎಸ್‌ಡಿಎಂಸಿ ಉಪಾಧ್ಯಕ್ಷೆ ಶಕುಂತಲಾ, ಸದಸ್ಯೆ ವನಜಾಕ್ಷಿ, ಗ್ರಾ.ಪಂ ಸದಸ್ಯ ಎಂ.ಜಿ.ರುದ್ರಮುನಿ ಸ್ವಾಮಿ, ಶಿಕ್ಷಕರಾದ ಟಿ.ಎಂ.ಕೆಂಪೇಗೌಡ, ಪುಟ್ಟರಾಮರಾಜೇ ಅರಸ್‌, ಮರೀಗೌಡ, ಇಸಾಕ್‌ ಬಾಗವಾನ್‌, ಸವಿತಾ, ಮೀನಾಕ್ಷಿ, ಶಿವಕುಮಾರಿ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.