ADVERTISEMENT

ಹಾಲಿನ ಖರೀದಿ ದರ ಕಡಿತ: ವ್ಯಾಪಕ ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 5:02 IST
Last Updated 10 ಜನವರಿ 2018, 5:02 IST
ಮದ್ದೂರು ಸಮೀಪದ ಗೆಜ್ಜಲೆಗೆರೆಯಲ್ಲಿರುವ ಮನ್‌ಮುಲ್‌ ಘಟಕ (ಸಂಗ್ರಹ ಚಿತ್ರ)
ಮದ್ದೂರು ಸಮೀಪದ ಗೆಜ್ಜಲೆಗೆರೆಯಲ್ಲಿರುವ ಮನ್‌ಮುಲ್‌ ಘಟಕ (ಸಂಗ್ರಹ ಚಿತ್ರ)   

ಮಂಡ್ಯ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮನ್‌ಮುಲ್‌) ರೈತರಿಂದ ಖರೀದಿಸುವ ಹಾಲಿನ ದರ ಕಡಿತ ಮಾಡಿರುವುದಕ್ಕೆ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಮನ್‌ಮುಲ್‌ ವಿರುದ್ಧ ಹೋರಾಟ ನಡೆಸಲು ಮುಂದಾಗಿವೆ.

ಜ.1ರಿಂದ ಮನ್‌ಮುಲ್‌ ₹ 2 ದರ ಕಡಿತ ಮಾಡಿದೆ. ಹಾಲಿನ ಶೇಖರಣಾ ಪ್ರಮಾಣ ಹೆಚ್ಚಾಗಿದ್ದು ನಿತ್ಯ 1.30 ಲಕ್ಷ ಕೆ.ಜಿ. ಹಾಲು ಸಂಗ್ರಹವಾಗುತ್ತಿದೆ. ಸಂಸ್ಥೆ ₹ 18 ಕೋಟಿ ನಷ್ಟ ಅನುಭವಿಸುತ್ತಿರುವ ಕಾರಣ ದರ ಕಡಿತ ಮಾಡುವುದು ಅನಿವಾರ್ಯ ಎಂದು ಆಡಳಿತ ಮಂಡಳಿ ತಿಳಿಸಿದೆ. ಆದರೆ ಮನ್‌ಮುಲ್‌ ನಿರ್ಧಾರಕ್ಕೆ ರೈತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಹೈನುಗಾರಿಕೆ ಸಂಜೀವಿನಿಯಾಗಿದೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಕಡಿತ ಮಾಡಿರುವುದು ಖಂಡನೀಯ. ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಮನ್‌ಮುಲ್‌ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರಬೇಕು ಎಂದು ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ. ಜ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಬರುತ್ತಿದ್ದು ಕಾರ್ಯಕ್ರಮ ಮುಗಿದ ನಂತರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಈ ಕುರಿತು ಮನ್‌ಮುಲ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರಿಗೂ ಪತ್ರ ಬರೆದಿದ್ದು ಶೀಘ್ರ ನಿರ್ಧಾರ ವಾಪಸ್‌ ಪಡೆಯದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಬರಗಾಲದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿರುವ ರೈತರಿಗೆ ಹೈನುಗಾರಿಕೆ ಆಸರೆಯಾಗಿದೆ. ಹೆಣ್ಣುಮಕ್ಕಳು ಹಸು, ಎಮ್ಮೆ ಸಾಕಿ ಮನೆಯ ವ್ಯವಹಾರ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಮನ್‌ಮುಲ್‌ ಆಗಾಗ ಹಾಲಿನ ದರ ಕಡಿತ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ಹಾಲಿನ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಸೋತಿರುವ ಆಡಳಿತ ಮಂಡಳಿ ಅದರ ಭಾರವನ್ನು ರೈತರ ಮೇಲೆ ಹೊರಿಸುತ್ತಿದೆ.  ಶೀಘ್ರ ದರ ಕಡಿತ ನಿರ್ಧಾರವನ್ನು ವಾಪಸ್‌ ಪಡೆಯಬೇಕು. ಬಾಕಿ ಹಣವನ್ನು ರೈತರಿಗೆ ವಿತರಣೆ ಮಾಡಬೇಕು’ ಎಂದು ಶಾಸಕ ಪುಟ್ಟಣ್ಣಯ್ಯ ಒತ್ತಾಯ ಮಾಡಿದರು.

‘2014ರಲ್ಲಿ ಲೀಟರ್‌ ಹಾಲಿನ ಬೆಲೆ ₹ 26 ಇತ್ತು. ಈ ನಾಲ್ಕು ವರ್ಷಗಳಲ್ಲಿ ಹಸು, ಎಮ್ಮೆಗಳ ಬೆಲೆ ದುಪ್ಪಟ್ಟಾಗಿದೆ. ಮೇವು, ಆಹಾರಗಳ ಬೆಲೆಯಲ್ಲಿ ಅಪಾರ ಏರಿಕೆ ಕಂಡುಬಂದಿದೆ. ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಆದರೂ ಹಾಲಿನ ದರ ಮಾತ್ರ ಇಳಿಯುತ್ತಲೇ ಇದೆ. ಇದಕ್ಕೆ ಮನ್‌ಮುಲ್‌ ಆಡಳಿತ ಮಂಡಳಿಯ ಭ್ರಷ್ಟಾಚಾರವೇ ಕಾರಣ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಆರೋಪಿಸಿದರು.

ಮುಖ್ಯಮಂತ್ರಿಗೂ ಬಿಸಿ : ಹಾಲಿನ ದರ ಕಡಿತದ ಬಿಸಿ ಜ.12ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಟ್ಟಲಿದೆ. ರೈತಸಂಘ, ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ಮುಖ್ಯಮಂತ್ರಿ ಭೇಟಿ ನೀಡುವ ದಿನವೇ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಕಾರ್ಯಕ್ರಮ ಮಳವಳ್ಳಿ, ಮದ್ದೂರು, ಕೆ.ಆರ್‌.ಪೇಟೆಯಲ್ಲಿ ನಡೆಯಲಿದ್ದು ಅಲ್ಲಿಯ ರೈತರೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ನಷ್ಟ ಸರಿದೂಗಿಸುವ ಯತ್ನ: ಮನ್‌ಮುಲ್‌

‘ಹಾಲಿನ ಉಪ ಉತ್ಪನ್ನಗಳ ದಾಸ್ತಾನು ಹಾಗೂ ಮಾರಾಟದ ಬೇಡಿಕೆ ಕುಸಿದಿರುವ ಕಾರಣ ಬೆಲೆ ಕಡಿತ ಅನಿವಾರ್ಯವಾಗಿತ್ತು’ ಎಂದು ಮನ್‌ಮುಲ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಒಕ್ಕೂಟದಿಂದ ಮೆಗಾ ಡೇರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. 2018ರಲ್ಲಿ ಉಳಿದಿರುವ 90 ದಿನದ ಅವಧಿಯ ಕ್ರೋಡೀಕೃತ ನಷ್ಟ ಸರಿದೂಗಿಸಿ ಲಾಭ ಗಳಿಸಬೇಕಾದ ಅವಶ್ಯಕತೆ ಇರುವುದರಿಂದ ಬೆಲೆ ಕಡಿತ ಮಾಡಲಾಗಿದೆ. ನಷ್ಟ ಸಮತೋಲಿತ ಸ್ಥಿತಿಗೆ ಬಂದಾಗ ಲಾಭಾಂಶವನ್ನು ರೈತರಿಗೆ ಹಂಚಲಾಗುವುದು. ಪ್ರಸ್ತುತ 9.18 ಲಕ್ಷ ಕೆ.ಜಿ ಹಾಲು ಸಂಗ್ರಹವಾಗುತ್ತಿದ್ದು 4,800 ಮೆಟ್ರಿಕ್‌ ಟನ್‌ ಹಾಲಿನ ಪುಡಿ ದಾಸ್ತಾನು ಇದೆ. ಈ ದಾಸ್ತಾನು ವಿಲೇವಾರಿ ಆದ ನಂತರ ಹಾಲಿನ ದರವನ್ನು ಮತ್ತೆ ಪರಿಷ್ಕರಣೆ ಮಾಡಲಾಗುವುದು’ ಎಂದು ಹೇಳಿದರು.

‘ಹಾಲಿನ ಪುಡಿ ದರವೂ ಕುಸಿದಿದ್ದು ಬೇಡಿಕೆ ಕಡಿಮೆಯಾಗಿದೆ. ದಾಸ್ತಾನು ವಿಲೇವಾರಿ ಕೋರಿ ರಾಜ್ಯ ಹಾಲು ಮಹಾಮಂಡಳಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೂ ಉಪ ಉತ್ಪನ್ನಗಳಿಗೆ ಯಾವುದೇ ಬೇಡಿಕೆ ಬಂದಿಲ್ಲ. ರೈತರ ಹಾಲು ಸಂಗ್ರಹಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಲು ದರ ಕಡಿತ ಮಾಡಲಾಗಿದೆ. ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ’ ಎಂದು ಹೇಳಿದರು.‌ ಮನ್‌ಮುಲ್‌ ಸಿಇಒ ಡಾ.ಸುರೇಶ್‌ಬಾಬು, ನಿರ್ದೇಶಕರಾದ ಚಂದ್ರ, ಮಹೇಶ್‌ ಹಾಜರಿದ್ದರು.

12ಕ್ಕೆ ರೈತ ಮಹಿಳೆಯರ ಮುತ್ತಿಗೆ‌

‘ಹಾಲಿನ ಖರೀದ ದರ ಕಡಿತ ಮಾಡಿರುವುದನ್ನು ಜೆಡಿಎಸ್‌ ಖಂಡಿಸುತ್ತದೆ. ಈ ನಿರ್ಧಾರ ವಿರೋಧಿಸಿ ಜ.12ರಂದು ರೈತ ಮಹಿಳೆಯರು ಮನ್‌ಮುಲ್‌ ಘಟಕಕ್ಕೆ ಮುತ್ತಿಗೆ ಹಾಕಲಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮನ್‌ಮುಲ್‌ ₹ 2 ಕಡಿತ ಮಾಡಿರುವುದು ಖಂಡನೀಯ. ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಸಂಸದ ಸಿ.ಎಸ್‌.ಪುಟ್ಟರಾಜು ನೇತೃತ್ವದಲ್ಲಿ ಅಪಾರ ಸಂಖ್ಯೆಯ ರೈತರು, ರೈತ ಮಹಿಳೆಯರು ಮನ್‌ಮುಲ್‌ ಘಟಕಕ್ಕೆ ಮುತ್ತಿಗೆ ಹಾಕಲಿದ್ದಾರೆ’ ಎಂದು ಹೇಳಿದರು.

ಮನ್‌ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ ಮಾತನಾಡಿ, ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆಂದೂ ಹಾಲಿನ ದರ ಕಡಿತ ಮಾಡಿಲ್ಲ. ಹಾಲಿನ ಉಪ ಉತ್ಪನ್ನ ಮಾರಾಟ ಮಾಡಲು ವಿಫಲವಾಗಿರುವ ಆಡಳಿತ ಮಂಡಳಿ ನಷ್ಟದ ಭಾರವನ್ನು ಬಡ ರೈತರ ಮೇಲೆ ಹೊರಿಸುತ್ತಿದೆ. ಮನ್‌ಮುಲ್‌ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹೇಳಿದರು. ಜೆಡಿಎಸ್‌ ಮುಖಂಡ ಡಾ.ಕೃಷ್ಣ, ತಿಮ್ಮೇಗೌಡ, ತಮ್ಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.