ADVERTISEMENT

ಶ್ರೀರಂಗನ ಸನ್ನಿಧಿಯಲ್ಲಿ ಕಣ್ಮನ ಸೆಳೆದ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 6:46 IST
Last Updated 16 ಜನವರಿ 2018, 6:46 IST
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ಸಂಜೆ ನಡೆದ ಲಕ್ಷ ದೀಪೋತ್ಸವ ಕಣ್ಮನ ಸೆಳೆಯಿತು
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ಸಂಜೆ ನಡೆದ ಲಕ್ಷ ದೀಪೋತ್ಸವ ಕಣ್ಮನ ಸೆಳೆಯಿತು   

ಶ್ರೀರಂಗಪಟ್ಟಣ: ಮಕರ ಸಂಕ್ರಾಂತಿ ನಿಮಿತ್ತ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಸಂಜೆ ನಡೆದ ಲಕ್ಷ ದೀಪೋತ್ಸವ ಕಣ್ಮನ ಸೆಳೆಯಿತು.

ಗೋಧೂಳಿ ಲಗ್ನದಲ್ಲಿ ಸಂಜೆ 6.30ಕ್ಕೆ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಮುಂದಿನ ರಸ್ತೆಯಲ್ಲಿ, ಮಿನಿ ವಿಧಾನಸೌಧ ವೃತ್ತವರೆಗೆ 250 ಮೀಟರ್‌ ಉದ್ದಕ್ಕೆ ದೀಪಗಳನ್ನು ಜೋಡಿಸಲಾಗಿತ್ತು.

ನೆಲದ ಮೇಲೆ ಅಡಿಕೆ ದಬ್ಬೆಯ 8 ಸಾಲುಗಳು ಹಾಗೂ ರಸ್ತೆಯಲ್ಲಿ 10 ಸಾಲುಗಳಲ್ಲಿ ದೀಪ ಜೋಡಿಸಲಾಗಿತ್ತು. ಶ್ರೀರಂಗನಾಥಸ್ವಾಮಿ ದೇವಾಲಯ ಆವರಣ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಪೇಟೆ ನಾರಾಯಣಸ್ವಾಮಿ ದೇಗುಲ, ಗಂಗಾಧರೇಶ್ವರ ದೇವಾಲಯ ಸೇರಿ 80 ಸಾವಿರಕ್ಕೂ ಹೆಚ್ಚು ದೀಪಗಳನ್ನು ಇಟ್ಟು ಬೆಳಗಿಸಲಾಯಿತು.

ADVERTISEMENT

ಲಕ್ಷ ದೀಪೋತ್ಸವ ಆಚರಣಾ ಸಮಿತಿ ಇದಕ್ಕಾಗಿ ಒಂದು ಸಾವಿರ ಲೀಟರ್‌ ಎಣ್ಣೆ ತರಿಸಿತ್ತು. ದೀಪೋತ್ಸವ ಆರಂಭವಾದ ಸಮಯಕ್ಕೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಸ್ವರ್ಗದ ಬಾಗಿಲು ತೆರೆಯಲಾಯಿತು. ಆದಿರಂಗನ ಬೆಣ್ಣೆಯಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ಮಂಡ್ಯ, ಮೈಸೂರು, ಬೆಂಗಳೂರು ಇತರ ಕಡೆಗಳಿಂದಲೂ ಆಗಮಿಸಿದ್ದ ಭಕ್ತರು ಶ್ರೀರಂಗನಾಥ ದರ್ಶನ ಪಡೆದು ಪುನೀತರಾದರು. ದೇವಾಲಯದ ಆವರಣದಲ್ಲಿ ಬಣ್ಣ ಬಣ್ಣದ ರಂಗವಲ್ಲಿಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.