ADVERTISEMENT

ಅಪಾಯಕಾರಿ ತಿರುವು: ತಪ್ಪದ ಅಪಘಾತ

ಎಂ.ಎನ್.ಯೋಗೇಶ್‌
Published 12 ಫೆಬ್ರುವರಿ 2018, 7:25 IST
Last Updated 12 ಫೆಬ್ರುವರಿ 2018, 7:25 IST
ಮಂಡ್ಯದ ಹನಿಯಂಬಾಡಿ ರಸ್ತೆಯ ಕಿರಿದಾದ ತಿರುವಿನಲ್ಲಿ ಟ್ರಾಫಿಕ್‌ ಕಿರಿಕಿರಿ ಉಂಟಾಗಿರುವುದು
ಮಂಡ್ಯದ ಹನಿಯಂಬಾಡಿ ರಸ್ತೆಯ ಕಿರಿದಾದ ತಿರುವಿನಲ್ಲಿ ಟ್ರಾಫಿಕ್‌ ಕಿರಿಕಿರಿ ಉಂಟಾಗಿರುವುದು   

ಮಂಡ್ಯ: ಅತ್ಯಂತ ಕಿರಿದಾದ ಹನಿಯಂಬಾಡಿ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್‌ ಕಿರಿಕಿರಿ ತಪ್ಪಿದ್ದಲ್ಲ. ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅವರ ನಿವಾಸದ ಸಮೀಪದಲ್ಲೇ ಇರುವ ರಸ್ತೆಯ ಅಪಾಯಕಾರಿ ತಿರುವಿನಲ್ಲಿ ಬಿದ್ದು ಗಾಯಗೊಂಡವರಿಗೆ ಲೆಕ್ಕವಿಲ್ಲ.

ನಗರದ ವಿ.ವಿ ರಸ್ತೆಯಿಂದ ಹನಿಯಂಬಾಡಿ ಕಡೆಗೆ ನೇರ ಸಂಪರ್ಕ ಹೊಂದಿರುವ ಈ ರಸ್ತೆ ಮಾರಮ್ಮ ದೇವಾಲಯದ ಬಳಿಯ ತಿರುವಿನಲ್ಲಿ ಅತ್ಯಂತ ಕಿರಿದಾಗಿದೆ. ಇದು ಮಳವಳ್ಳಿ ರಸ್ತೆಗೆ ಕೂಡಿಕೊಳ್ಳುತ್ತದೆ. ಮಳವಳ್ಳಿ ಕಡೆಯಿಂದ ರಸ್ತೆ ಇಳಿಜಾರಿನಿಂದ ಕೂಡಿದ್ದು ವಾಹನಗಳು ವೇಗವಾಗಿ ಬರುತ್ತವೆ. ತಿರುವಿನಲ್ಲಿ ನಿರ್ಲಕ್ಷ್ಯ ಮಾಡಿದರೆ ಪಕ್ಕದಲ್ಲೇ ಇರುವ ಚರಂಡಿಗೆ ಬೀಳುತ್ತವೆ. ಈಗಾಗಲೇ ವಾರಕ್ಕೆ 2–3 ಅಪಘಾತಗಳು ಈ ರಸ್ತೆಯಲ್ಲಿ ನಡೆಯುತ್ತವೆ. ಈಚೆಗೆ ಹಂಪ್‌ ಹಾಕಿದ್ದು ವೇಗ ತಗ್ಗುವ ಕಾರಣ ಪ್ರಾಣಕ್ಕೇನೂ ಅಪಾಯ ಇಲ್ಲ. ಆದರೆ ರಸ್ತೆಯ ಎರಡೂ ಬದಿಯಲ್ಲಿ ಕಲ್ಲುಗಳಿದ್ದು ತಲೆಗೆ ಬಡಿದರೆ ಅಪಘಾತದ ತೀವ್ರತೆ ಹೆಚ್ಚಾಗುವ ಅಪಾಯ ಇದೆ.

ತಿರುವಿನ ಪಕ್ಕದಲ್ಲೇ ಚಿಲ್ಲರೆ ಅಂಗಡಿಯೊಂದಿದ್ದು ಅಂಗಡಿ ಮಾಲೀಕರು ಸದಾ ಭಯದಲ್ಲೇ ವಹಿವಾಟು ನಡೆಸುತ್ತಾರೆ. ಯಾವ ಕ್ಷಣದಲ್ಲಿ ಅಂಗಡಿಯ ಮೇಲೆ ವಾಹನಗಳು ನುಗ್ಗುತ್ತವೆಯೋ ಎಂಬ ಭಯ ಅವರನ್ನು ಕಾಡುತ್ತದೆ. ಅಂಗಡಿಗೆ ಬರುವ ಮಕ್ಕಳಿಗೂ ಇದು ಬಹಳ ಅಪಾಯಕಾರಿ ಜಾಗವಾಗಿದೆ.

ADVERTISEMENT

‘ಮೊನ್ನೆತಾನೆ ಬೈಕ್‌ ಸವಾರರೊಬ್ಬರು ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ತಿಂಗಳಿಗೆ ಏಳೆಂಟು ಅಪಘಾತಗಳು ಈ ಜಾಗದಲ್ಲಿ ನಡೆಯುತ್ತವೆ. ಬೆಳಿಗ್ಗೆ 8ರಿಂದ 10ರವರೆಗೂ ಹಾಗೂ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಾಹನ ದಟ್ಟಣೆ ವಿಪರೀತ ಇರುತ್ತದೆ. ಶಾಲಾ ವಾಹನಗಳು ಕೂಡ ಇದೇ ರಸ್ತೆಯಲ್ಲಿ ತೆರಳುತ್ತವೆ. ಯಾವಾಗ ಏನು ಅನಾಹುತ ಸಂಭವಿಸುತ್ತದೋ ಎಂಬ ಭಯ ನಮ್ಮನ್ನು ಕಾಡುತ್ತಿದೆ’ ಎಂದು ಅಂಗಡಿ ಮಾಲೀಕರಾದ ರೇಣುಕಾ ಹೇಳಿದರು.

ಬಳಕೆಯಾಗದ ಮುಖ್ಯರಸ್ತೆ: ನಗರದಿಂದ ಮಳವಳ್ಳಿ ತಲುಪಲು ಕಿರುಗಾವಲು–ಮಂಡ್ಯ ಮುಖ್ಯ ರಸ್ತೆ ಇದೆ. ಆದರೆ ಮಳವಳ್ಳಿಗೆ ತೆರಳುವ ಶೇ 70ರಷ್ಟು ವಾಹನ ಚಾಲಕರು ಹನಿಯಂಬಾಡಿ ರಸ್ತೆಯನ್ನೇ ಬಳಸುತ್ತಾರೆ. ಕೇವಲ ಒಂದು ಕಿ.ಮೀ. ಉಳಿತಾಯಕ್ಕಾಗಿ ಮುಖ್ಯರಸ್ತೆ ಬಿಟ್ಟು ಸಣ್ಣ ರಸ್ತೆಯಲ್ಲಿ ಬರುತ್ತಾರೆ. ಇದರಿಂದ ಟ್ರಾಫಿಕ್‌ ಜಾಮ್‌ ಹೆಚ್ಚಾಗುತ್ತದೆ.

‘ಈ ರಸ್ತೆಯನ್ನು ವಿವೇಕಾನಂದ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಸ್ತಾಪ ಇತ್ತು. ಆದರೆ ಇಲ್ಲಿ ವಾಸದ ಮನೆಗಳು ಇರುವ ಕಾರಣ ರಸ್ತೆ ಅಗಲೀಕರಣಕ್ಕೆ ಕೈ ಹಾಕಿಲ್ಲ. ಪಕ್ಕದಲ್ಲೇ ಮುಖ್ಯರಸ್ತೆ ಇದ್ದು ಇನ್ನೊಂದು ರಸ್ತೆ ನಿರ್ಮಿಸುವ ಅಗತ್ಯವೂ ಇಲ್ಲ. ಈ ಕಿರಿದಾದ ಜಾಗದಲ್ಲಿ ಎರಡೂ ಕಡೆ ಇರುವ ಚರಂಡಿ ಮುಚ್ಚಿ ವಾಹನ ಸಂಚಾರಕ್ಕೆ ಜಾಗ ಮಾಡಿಕೊಡಬಹುದು.

ಆದರೆ ನಗರಸಭೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರತಿನಿತ್ಯ ಅಪಘಾತಗಳು ನಡೆಯುತ್ತಲೇ ಇವೆ. ನಗರಸಭೆ ಅಧ್ಯಕ್ಷರು ಸಮೀಪದಲ್ಲೇ ಇದ್ದರೂ ಸಮಸ್ಯೆಗೆ ಮುಕ್ತಿ ದೊರೆತಿಲ್ಲ‍’ ಎಂದು ರೈತ ಮುಖಂಡ ಹನಿಯಂಬಾಡಿ ನಾಗರಾಜ್‌ ಹೇಳಿದರು.

ಈ ತಿರುವು 20ನೇ ವಾರ್ಡ್‌ ವಾಪ್ತಿಯಲ್ಲಿ ಇದ್ದು ನಗರಸಭೆ ಉಪಾಧ್ಯಕ್ಷೆ ಸುಜಾತಾ ಮಣಿ ಪ್ರತಿನಿಧಿಸುತ್ತಾರೆ. ಅಧ್ಯಕ್ಷರ ಬಡಾವಣೆ, ಉಪಾಧ್ಯಕ್ಷೆಯ ವಾರ್ಡ್‌ ಆಗಿದ್ದರೂ ಅಪಾಯಕಾರಿ ತಿರುವನ್ನು ದುರಸ್ತಿ ಮಾಡಿಸಲು ಸಾಧ್ಯವಾಗದೇ ಇರುವುದು ದುರದೃಷ್ಟಕರ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ರಸ್ತೆಯ ಎರಡೂ ಕಡೆ ಚರಂಡಿ ಮುಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿಸಿ ಎರಡು ತಿಂಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಉಪಾಧ್ಯಕ್ಷೆ ಸುಜಾತಾ ಮಣಿ ಹೇಳಿದರು.

* * 

ಚರಂಡಿ ಮುಚ್ಚಿ ಅಪಘಾತ ತಡೆಯಲು ಕ್ರಮ ಕೈಗೊಳ್ಳು ತ್ತೇವೆ. ಫಲಕ ಅಳವಡಿಸಲಾಗುವುದು. ಸವಾರರು ಮುಖ್ಯ ರಸ್ತೆ ಬಳಸುವಂತೆ ಜಾಗೃತಿ ಮೂಡಿಸಲಾಗುವುದು
ಹೊಸಹಳ್ಳಿ ಬೋರೇಗೌಡ ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.