ADVERTISEMENT

ಸಮಾಜಮುಖಿ ಚಿಂತನೆಗಳಿಂದ ಉತ್ತಮ ಸಮಾಜ: ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಕೃತಕ ಕೈ, ಕಾಲು ಜೋಡಣಾ ಶಿಬಿರದ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:39 IST
Last Updated 22 ಜುಲೈ 2025, 2:39 IST
ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕೃತಕ ಕೈ ಮತ್ತು ಕಾಲು ಜೋಡಣಾ ಉಚಿತ ಶಿಬಿರದ ಸಮಾರೋಪ ಸಮಾರಂಭವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು
ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕೃತಕ ಕೈ ಮತ್ತು ಕಾಲು ಜೋಡಣಾ ಉಚಿತ ಶಿಬಿರದ ಸಮಾರೋಪ ಸಮಾರಂಭವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು   

ನಾಗಮಂಗಲ: ‘ಪ್ರತಿಯೊಬ್ಬರು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆ ನಿಟ್ಟಿನಲ್ಲಿ ಜನಪರ ಸೇವೆ ಮಾಡುವವರೊಂದಿಗೆ ನಮ್ಮ ಮಠವೂ ಸೇರಿದಂತೆ ಸಂಸ್ಥೆಗಳು ಸದಾ ಜೊತೆಯಲ್ಲಿರಲಿವೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಿರ್ಮಲಾನಂದನಾಥ ಸ್ವಾಮೀಜಿ ಅವರ ದೀಕ್ಷ ದಿನೋತ್ಸವ ಅಂಗವಾಗಿ ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕೃತಕ ಕೈ ಮತ್ತು ಕಾಲು ಜೋಡಣಾ ಉಚಿತ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವರಿಗೆ ಹುಟ್ಟಿನಿಂದ, ಮತ್ತೆ ಕೆಲವರಿಗೆ ಆಕಸ್ಮಿಕ ಘಟನೆಗಳಿಂದ ನ್ಯೂನತೆಗಳು ಉಂಟಾಗಿರುತ್ತವೆ. ಆದರೆ ಯಾವುದೇ ತಪ್ಪುಗಳಿಲ್ಲದಿದ್ದರೂ ಕೆಲವರು ನ್ಯೂನತೆಯಿಂದ ಬಳಲುವಂತಾಗಿದೆ. ಅಂಗಗಳು ಊನವಾದ ವ್ಯಕ್ತಿಗೆ ಮಾತ್ರವೇ ನಿಜವಾದ ಮಹತ್ವ ತಿಳಿದಿರುತ್ತದೆ. ಇಂದಿನ ರೋಬೋಟಿಕ್ ಯುಗದಲ್ಲಿ ಮನುಷ್ಯ ಆಲೋಚಿಸುವ ಎಲ್ಲಾ ಅನ್ವೇಷಣೆಗಳಾಗಿ ಫಲ ನೀಡುತ್ತಿದೆ’ ಎಂದರು.

ADVERTISEMENT

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮಾತನಾಡಿ,‘ಬಡವರು ಮತ್ತು ಆರ್ಥಿಕ ದುರ್ಬಲರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಆದರೂ ಜನರ ಬೇಡಿಕೆಗೆ ತಕ್ಕಂತೆ ಎಲ್ಲವನ್ನೂ ಪೂರೈಸಲು ಸರ್ಕಾರದಿಂದಲೂ ಸಾಧ್ಯವಾಗುವುದಿಲ್ಲ. ಸರ್ಕಾರದೊಂದಿಗೆ ಸಮಾಜ ಸೇವೆ ಮಾಡುವ ಮನಸ್ಸಿರುವವರು, ಸಂಘ-ಸಂಸ್ಥೆಗಳು ಕೈಜೋಡಿಸಿದಾಗ ಬಡವರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಪ್ರಸ್ತುತ ಮಧುಮೇಹದಿಂದ ಹೆಚ್ಚಾಗಿ ಅಂಗಾಂಗ ನ್ಯೂನತೆಗಳಿಗೆ ಜನರು ಒಳಗಾಗುತ್ತಿದ್ದಾರೆ. ಯಾರೇ ಆಗಲಿ ಮಧುಮೇಹ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಿಕೊಳ್ಳಿ. ಮಧುಮೇಹ ಮತ್ತು ರಕ್ತದೊತ್ತಡ ಇರುವವರ ಮನೆಮನೆಗೆ ತೆರಳಿ ತಪಾಸಣೆ ನಡೆಸಿ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಯನ್ನು ಸರ್ಕಾರದಿಂದ ಚಾಲನೆ ಮಾಡಲಾಗಿದೆ’ ಎಂದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿ ದೇವರಾಜು, ಆದಿಚುಂಚನಗಿರಿ ವಿವಿ ಕುಲಪತಿ ಶ್ರೀಧರ್, ಮಾಜಿ ಕುಲಪತಿ ಡಾ.ಎಂ.ಎ.ಶೇಖರ್, ಆದಿಚುಂಚನಗಿರಿ ವಿವಿ ರಿಜಿಸ್ಟಾರ್ ಸಿ.ಕೆ.ಸುಬ್ಬರಾಯ್, ಕರ್ನಾಟಕ ಮಾರವಾಡಿ ಯೂತ್ ಪೆಢರೇಷನ್ ಮುಖ್ಯಸ್ಥ ಅಶೋಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮ್, ಆದಿಚುಂಚನಗಿರಿ ಆಸ್ಪತ್ರೆ ಮುಖ್ಯಸ್ಥ ಡಾ.ಶಿವಕುಮಾರ್ ಇದ್ದರು.

'ಆರೋಗ್ಯ ಕ್ಷೇತ್ರ ಸೇವೆಯಾಗಿಯೇ ಉಳಿಯಲಿ’:

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮಾತನಾಡಿ ‘ಪ್ರಸ್ತುತ ಆರೋಗ್ಯ ಕ್ಷೇತ್ರ ವಾಣಿಜ್ಯ ಕ್ಷೇತ್ರವೂ ಆಗಿದೆ. ಬಂಡವಾಳ ಹೂಡಿ ಲಾಭಗಳಿಸುವ ಯೋಚನೆ ಮತ್ತು ಯೋಜನೆ ಎಲ್ಲರದ್ದಾಗಿದೆ. ಆದರೆ ಆರೋಗ್ಯ ಕ್ಷೇತ್ರವು ಸೇವಾ ಕ್ಷೇತ್ರವಾಗಿಯೇ ಉಳಿಯಬೇಕೇ ಹೊರತು ವ್ಯವಹಾರದ ಮಾದರಿಯಲ್ಲಿ ನಡೆಸಬಾರದು. ಆರೋಗ್ಯ ಸೇವೆ ಕೇವಲ ಲಾಭದ ದೃಷ್ಟಿಯಲ್ಲಿ ಮಾಡಿದರೆ ಅದು ನಿಜವಾದ ಸೇವಾ ಕ್ಷೇತ್ರಕ್ಕೆ ಅಪಮಾನವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.