ಶ್ರೀರಂಗಪಟ್ಟಣ: ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಶಿಕ್ಷಕರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ದೂರುಗಳ ನಡುವೆಯೂ ಇಲ್ಲೊಬ್ಬ ಶಿಕ್ಷಕರು ಬೇಸಿಗೆ ರಜೆಯಲ್ಲೂ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ ಕಾಳಜಿ ಮೆರೆಯುತ್ತಿದ್ದಾರೆ.
ತಾಲ್ಲೂಕಿನ ಸಬ್ಬನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಎನ್. ಪುರುಷೋತ್ತಮ ರಜೆ ಇದ್ದರೂ ಮನೆಯಲ್ಲಿ ಕೂರದೆ ಪ್ರತಿದಿನ ಶಾಲೆಗೆ ಬಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಪಾಠದ ಜತೆಗೆ ಆಟ ಆಡಿಸುವುದು, ಹಾಡು, ಕತೆ, ಹೇಳುವುದು ಮತ್ತು ಹೇಳಿಸುವ ಮೂಲಕ ಮಕ್ಕಳಿಗೆ ಮನರಂಜನೆ ನೀಡುತ್ತಿದ್ದಾರೆ.
ತಾಲ್ಲೂಕಿನ ಅರಕೆರೆಯಿಂದ ಶ್ರೀರಂಗಪಟ್ಟಣಕ್ಕೆ ಒಂದು ಬಸ್‌ನಲ್ಲಿ, ಅಲ್ಲಿಂದ ಸಬ್ಬನಕುಪ್ಪೆ ಗ್ರಾಮಕ್ಕೆ ಮತ್ತೊಂದು ಬಸ್ ಹಿಡಿದು ಬರುವ ಪುರುಷೋತ್ತಮ ಕಳೆದ ಏ. 12ರಿಂದ ನಿರಂತರವಾಗಿ ಶಾಲೆಗೆ ಬರುತ್ತಿದ್ದಾರೆ. ಶಾಲೆಯಲ್ಲಿ ಪಾಠ ಹೇಳುವ ಜತೆಗೆ ಜತೆಗೆ ಬಸವ ಜಯಂತಿ, ಶ್ರೀರಾಮ ನವಮಿಯನ್ನೂ ಆಚರಿಸಿದ್ದಾರೆ. ಶಾಲೆಯಲ್ಲಿ ಒಂದರಿಂದ 7ನೇ ತರಗತಿ ವರೆಗೆ 41 ವಿದ್ಯಾರ್ಥಿಗಳಿದ್ದು, ಬೇಸಿಗೆ ರಜೆಯಲ್ಲಿ ನಡೆಯುತ್ತಿರುವ ತರಗತಿಗೆ 15ರಿಂದ 20 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನ ಈ ಶಾಲೆಯಲ್ಲಿ ಪಾಠ, ಪ್ರವಚನಗಳು ನಡೆಯುತ್ತಿವೆ.
‘ಬೇಸಿಗೆ ರಜೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಬೇಕು ಎಂಬ ಆದೇಶ ಇದೆ. ಮಕ್ಕಳಿಗೆ ಊಟ ಕೊಡುವ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದು, ಈ ನೆಪದಲ್ಲಿ ಪ್ರತಿದಿನ ಶಾಲೆಗೆ ಬಂದು ಮಕ್ಕಳಿಗೆ ಪಠ್ಯ ಮತ್ತು ಸಹಪಠ್ಯ ಚಟುವಟಿಕೆ ನಡೆಸುತ್ತಿದ್ದೇನೆ. ಮೇ 28ರವರೆಗೆ ಮಕ್ಕಳನ್ನು ಮುಂದಿನ ತರಗತಿಗೆ ಅಣಿಗೊಳಿಸುವ ಕೆಲಸ ಮಾಡಲಿದ್ದೇನೆ’ ಎಂದು ಮುಖ್ಯ ಶಿಕ್ಷಕ ಕೆ.ಎನ್. ಪುರುಷೋತ್ತಮ ಹೇಳುತ್ತಾರೆ.
‘ಪುರುಷೋತ್ತಮ ಮೇಷ್ಟ್ರು ಬೇಸಿಗೆ ರಜೆ ಇದ್ದರೂ ಪ್ರತಿ ದಿನ ಶಾಲೆಗೆ ಬರುತ್ತಿದ್ದಾರೆ. ನಮಗೆ ಚಾಕೊಲೇಟ್, ಬಿಸ್ಕಿಟ್ ತಂದು ಕೊಡುತ್ತಾರೆ. ಬೇಸಿಗೆ ಕಾಲ ಆಗಿರುವುದರಿಂದ ಷರಬತ್ತು ಮಾಡಿಸಿಕೊಡುತ್ತಾರೆ. ಸಿಹಿಯೂಟವನ್ನೂ ಹಾಕಿಸುತ್ತಿದ್ದಾರೆ. ಶಾಲೆಯಲ್ಲಿ ಪಾಠದ ಜತೆಗೆ ಕತೆ, ಕವಿತೆ ವಾಚನ ಮತ್ತು ಆಟೋಟಗಳಿಂದ ಮನರಂಜನೆ ಸಿಗುತ್ತಿದೆ’ ಎಂಬುದು ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಿಂಧು ಹೇಳುವ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.