ADVERTISEMENT

ಆ್ಯಸಿಡ್‌ ದಾಳಿಕೋರರಿಗೆ ಜೀವಾವಧಿ ಶಿಕ್ಷೆ

ಕಾನೂನು ಅರಿವು ಕಾರ್ಯಕ್ರಮ: ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 12:16 IST
Last Updated 31 ಆಗಸ್ಟ್ 2018, 12:16 IST
ಮಂಡ್ಯದ ಹಿಂದುಳಿದ ವರ್ಗಗಳ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಶುಕ್ರವಾರ ನಡೆದ ‘ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಕಾನೂನು ಅರಿವು’ ಕಾರ್ಯಕ್ರಮದಲ್ಲಿ ಜಿಲ್ಲಾ ಸಿವಿಲ್‌ ನ್ಯಾಯಾಧೀಶ ಮನ್ಸೂರ್‌ ಅಹಮದ್‌ ಜಮಾನ್‌ ಮಾತನಾಡಿದರು
ಮಂಡ್ಯದ ಹಿಂದುಳಿದ ವರ್ಗಗಳ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಶುಕ್ರವಾರ ನಡೆದ ‘ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಕಾನೂನು ಅರಿವು’ ಕಾರ್ಯಕ್ರಮದಲ್ಲಿ ಜಿಲ್ಲಾ ಸಿವಿಲ್‌ ನ್ಯಾಯಾಧೀಶ ಮನ್ಸೂರ್‌ ಅಹಮದ್‌ ಜಮಾನ್‌ ಮಾತನಾಡಿದರು   

ಮಂಡ್ಯ: ‘ಆ್ಯಸಿಡ್ ದಾಳಿಯನ್ನು ಕೋರ್ಟ್‌ ಬಹಳ ಗಂಭೀರವಾಗಿ ಪರಿಗಣಿಸಿದ್ದು ದಾಳಿಕೋರರಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ದಾಳಿಗೆ ಒಳಗಾದ ಸಂತ್ರಸ್ತರಿಗೆ ಸರ್ಕಾರ ₹ 5 ಲಕ್ಷದವರೆಗೆ ಪರಿಹಾರ ನೀಡುತ್ತದೆ’ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅನನ್ಯ ಹಾರ್ಟ್‌ ಸಂಸ್ಥೆ ವತಿಯಿಂದ ನಗರದ ಹಿಂದುಳಿದ ವರ್ಗಗಳ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಶುಕ್ರವಾರ ನಡೆದ ‘ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಕಾನೂನು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪುರುಷರ ಮೇಲೆ ರಾಜಕೀಯ ವೈಷಮ್ಯ, ದ್ವೇಷ, ಆಸ್ತಿ ಹಾಗೂ ಪ್ರತಿಷ್ಠೆಗಾಗಿ ಆ್ಯಸಿಡ್ ದಾಳಿ ಪ್ರಕರಣ ನಡೆಯುತ್ತವೆ. ಆದರೆ ಮಹಿಳೆಯರ ಮೇಲೆ ಬಹಳ ವಿಚಿತ್ರ ಕಾರಣಗಳಿಗೆ ದಾಳಿ ನಡೆಯುತ್ತವೆ. ನಿಸರ್ಗ ಕೊಟ್ಟ ಸೌಂದರ್ಯವೇ ದಾಳಿ ನಡೆಸಲು ಪ್ರೇರಣೆಯಾಗಿದೆ. ಪ್ರೇಮ ವೈಫಲ್ಯ, ಮದುವೆ ನಿರಾಕರಣೆ, ವರದಕ್ಷಿಣೆ ಕಿರುಕುಳ ಮುಂತಾದ ಕಾರಣಗಳಿಗೆ ದಾಳಿ ನಡೆಯುತ್ತಿವೆ. ಯುವತಿಯರ ಮೇಲೆ ಆ್ಯಸಿಡ್‌ ಹಾಕುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ’ ಎಂದು ಹೇಳಿದರು.

ADVERTISEMENT

‘ಆ್ಯಸಿಡ್ ದಾಳಿ ತಡೆಗಟ್ಟಲು ಸರ್ಕಾರ ಮುಕ್ತ ಮಾರಾಟವನ್ನು ನಿಷೇಧಗೊಳಿಸಿದೆ. ಪರವಾನಗಿ ಪಡೆದ ಕೇಂದ್ರಗಳಿಂದ ಮಾತ್ರ ಆಸ್ಪತ್ರೆ, ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರಗಳಗೆ ಮಾತ್ರ ಆ್ಯಸಿಡ್ ಪೂರೈಸಲಾಗುತ್ತದೆ. ಇಷ್ಟಾದರೂ ಅಲ್ಲಲ್ಲಿ ಆ್ಯಸಿಡ್‌ ದಾಳಿ ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ತಡೆಗಟ್ಟಲು ಇಡೀ ಸಮಾಜದ ಸಹಕಾರ ಅವಶ್ಯಕ. ದಾಳಿಗೆ ಒಳಗಾದ ಸಂತ್ರಸ್ತರನ್ನು ಸಮಾಜದ ಸದಸ್ಯರನ್ನಾಗಿ ನೋಡಬೇಕು. ಯಾವುದೇ ತಾರತಮ್ಯ ಮಾಡಬಾರದು’ ಎಂದು ಹೇಳಿದರು.

‘ಆ್ಯಸಿಡ್‌ ದಾಳಿಗೆ ಒಳಗಾದವರು ಅಪಾರ ನೋವು ಅನುಭವಿಸುತ್ತಾರೆ. ವಿಚಿತ್ರ ಮುಖ ಲಕ್ಷಣ, ಅಂಗವೈಕಲ್ಯದಿಂದ ಬಳಲುತ್ತಾರೆ. ಜೊತೆಗೆ ಮಾನಸಿಕ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಹೆಚ್ಚಾಗಿವೆ. 2013ರ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಂತರ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು, ಆ್ಯಸಿಡ್ ದಾಳಿ ಮಾಡುವವರಿಗೆ 10 ವರ್ಷ ಕಠಿಣ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಕುರಿತು ಕಾನೂನಿಗೆ ತಿದ್ದುಪಡಿ ತರಲಾಗಿದೆ’ ಎಂದರು.

‘ಸರ್ಕಾರ ಸಂತ್ರಸ್ತರ ಪರಿಹಾರ ಯೋಜನೆ ಜಾರಿಗೊಳಿಸಿದ್ದು ಅದರಡಿಯಲ್ಲಿ ₹ 3 ಲಕ್ಷದವರೆಗೆ ಪರಿಹಾರ ನೀಡಲಾಗುತ್ತದೆ. ದಾಳಿ ನಡೆದ 15 ದಿನದ ಒಳಗೆ ₹ 1 ಲಕ್ಷ ಹಣವನ್ನು ಆಸ್ಪತ್ರೆ ವೆಚ್ಚಕ್ಕಾಗಿ ನೀಡಲಾಗುತ್ತದೆ. ಜೊತೆಗೆ ಕೇಂದ್ರ ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ₹ 5 ಲಕ್ಷದವರೆಗಿನ ಪರಿಹಾರ ನೀಡಲಾಗುತ್ತದೆ. ದಾಳಿಯ ಪರಿಣಾಮ ಆಧರಿಸಿ ಅಂಗವಿಕಲ ಪ್ರಮಾಣಪತ್ರ ನೀಡಲಾಗುತ್ತಿದೆ. ಜೊತೆಗೆ ಹಲವು ಸರ್ಕಾರಿ ಸೌಲಭ್ಯ ನೀಡಲಾಗುತ್ತದೆ’ ಎಂದು ಹೇಳಿದರು.

ಅನನ್ಯ ಹಾರ್ಟ್‌ ಸಂಸ್ಥೆಯ ಬಿ.ಎಸ್.ಅನುಪಮಾ, ವಸತಿ ನಿಲಯದ ಮೇಲ್ವಿಚಾರಕಿ ಸವಿತಾ, ವಕೀಲ ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.