ADVERTISEMENT

ಮನ್‌ಮುಲ್‌ ‘ಹಾಲು–ನೀರು’ ಹಗರಣ: ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಕ್ರಮ

ಸಹಕಾರ ಸಚಿವ ಎಚ್‌.ಟಿ.ಸೋಮಶೇಖರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 1:22 IST
Last Updated 11 ಜೂನ್ 2021, 1:22 IST
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್‌ ಆವರಣಕ್ಕೆ ಗುರುವಾರ ಸಹಕಾರ ಸಚಿವ ಸೋಮಶೇಖರ್‌ ಭೇಟಿ ನೀಡಿದ್ದರು (ಎಡಚಿತ್ರ). ಮದ್ದೂರು ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿರುವ ಹಾಲಿನ ಟ್ಯಾಂಕರ್‌ ಪರಿಶೀಲನೆ ನಡೆಸುತ್ತಿರುವುದು
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್‌ ಆವರಣಕ್ಕೆ ಗುರುವಾರ ಸಹಕಾರ ಸಚಿವ ಸೋಮಶೇಖರ್‌ ಭೇಟಿ ನೀಡಿದ್ದರು (ಎಡಚಿತ್ರ). ಮದ್ದೂರು ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿರುವ ಹಾಲಿನ ಟ್ಯಾಂಕರ್‌ ಪರಿಶೀಲನೆ ನಡೆಸುತ್ತಿರುವುದು   

ಮದ್ದೂರು: ‘ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್‌) ದಲ್ಲಿ ನಡೆದಿರುವ ಹಾಲಿಗೆ ನೀರು ಬೆರೆಸಿದ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು ಮೂರು ದಿನಗಳಲ್ಲಿ ವರದಿ ಕೈಸೇರಲಿದೆ. ವರದಿ ಆಧರಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಒಕ್ಕೂಟಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಕಾರ ಇಲಾಖೆಯ ನಿಯಮ 64ರ ಅನ್ವಯ ತನಿಖೆ ನಡೆಯುತ್ತಿದೆ. ಈಗಾಗಲೇ ಒಕ್ಕೂಟದ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದರು.

ADVERTISEMENT

‘2-3 ದಿನಗಳಲ್ಲಿ ತನಿಖೆ ಪೂರ್ಣಗೊಂಡು ವರದಿ ಬರಲಿದೆ. ಎಷ್ಟು ವರ್ಷಗಳಿಂದ ಈ ಹಗರಣ ನಡೆಯುತ್ತಿದೆ, ಯಾರೆಲ್ಲ ಹಗರಣದಲ್ಲಿ ಭಾಗಿಯಾಗಿದ್ದಾರೆ, ಒಕ್ಕೂಟಕ್ಕೆ ಎಷ್ಟು ನಷ್ಟ ಆಗಿದೆ ಎಂಬುದು ಗೊತ್ತಾಗಲಿದೆ. ನಂತರ ಕಾರಣರಾದವರನ್ನು ತಕ್ಷಣವೇ ಬಂಧಿಸಲಾಗುವುದು’ ಎಂದರು.

‘ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲು ಮುಖ್ಯಮಂತ್ರಿ ಸೂಚಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಒಕ್ಕೂಟವು ರೈತರ ಸಂಸ್ಥೆಯಾಗಿದ್ದು, ರೈತರು ಕಷ್ಟಪಟ್ಟು ಹಾಲು ಹಾಕುತ್ತಾರೆ. ರೈತರ ಸಂಸ್ಥೆಗೆ ಅನ್ಯಾಯವಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ. ಹಾಲಿಗೆ ಟ್ಯಾಂಕರ್‌ಗಳಲ್ಲೇ ನೀರು ಬೆರಸಿದರೆ ಸರ್ಕಾರ ಸುಮ್ಮನೆ ಕೂರುವುದಿಲ್ಲ’ ಎಂದರು.

‘ರಾಜ್ಯದ ಬೇರೆ ಒಕ್ಕೂಟದಲ್ಲಿಯೂ ಇದೇ ರೀತಿಯ ಹಗರಣ ನಡೆದಿರುವ ಬಗ್ಗೆ ಮಾಹಿತಿ ಇದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ಈ ವೇಳೆ ಮನ್‌ಮುಲ್ ಅಧ್ಯಕ್ಷ ರಾಮಚಂದ್ರು, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಧನಂಜಯ ಇದ್ದರು.

ಪೊಲೀಸರ ವಿರುದ್ಧ ಅಸಮಾಧಾನ: ಹಗರಣಕ್ಕೆ ಸಂಬಂಧ ಪಟ್ಟಂತೆ ಡಿ.ವೈ.ಎಸ್.ಪಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆಯ ಬಗ್ಗೆ ಎಎಸ್‌ಪಿ ಧನಂಜಯ ಅವರಿಂದ ಮಾಹಿತಿ ಪಡೆದರು.

ಮನ್‌ಮುಲ್‌ಗೆ ತೆರಳುವ ಮದ್ದೂರಿನ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಹಾಲಿನ ಟ್ಯಾಂಕರ್‌ಗಳನ್ನು ವೀಕ್ಷಿಸಿದರು. ಹಾಲಿನ ಟ್ಯಾಂಕರ್‌ಗಳಲ್ಲಿ ಯಾವ ರೀತಿ ವಿನ್ಯಾಸ ಮಾಡಲಾಗಿತ್ತು ಎಂಬ ಬಗ್ಗೆ ಮನ್ ಮುಲ್ ಅಧ್ಯಕ್ಷ ರಾಮಚಂದ್ರು ಸಚಿವರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಎಎಸ್‌ಪಿ ಧನಂಜಯರನ್ನು ಕುರಿತು, ಟ್ಯಾಂಕರ್‌ಗಳನ್ನು ಯಾವ ವರ್ಕ್‌ಶಾಪ್‌ನಲ್ಲಿ ವಿನ್ಯಾಸಗೊಳಿಸಲಾ ಗಿದೆ, ಇದಕ್ಕೆ ಸಂಬಂಧಿಸಿದಂತೆ ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು.

‘ಈ ಬಗ್ಗೆ ಒಬ್ಬನನ್ನು ಬಂಧಿಸಲಾ ಗಿದೆ. ಆದರೆ 5 ವರ್ಷಗಳಿಂದ ಟ್ಯಾಂಕರ್ ನಲ್ಲಿ ಚಾಲಕನಾಗಿದ್ದ ವ್ಯಕ್ತಿ ನಾಪತ್ತೆಯಾ ಗಿದ್ದಾನೆ’ ಎಂದು ಎಎಸ್‌ಪಿ ತಿಳಿಸಿದರು.

ಎಎಸ್‌ಪಿ ವಿರುದ್ಧ ಕಿಡಿಕಾರಿದ ಸಚಿವರು ‘ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಂಧಿಸಬೇಕಿತ್ತು. ಪ್ರಕರಣವನ್ನು ಸರಿಯಾದ ರೀತಿಯನ್ನು ನಿಭಾಯಿಸಬೇಕಾಗಿತ್ತು’ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಸಚಿವರನ್ನು ಭೇಟಿಯಾಗಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.