ADVERTISEMENT

ಭಿನ್ನಾಭಿಪ್ರಾಯ ಮರೆಯಲು ಮುಖಂಡರಿಗೆ ಸಲಹೆ: ಎಚ್‌ಡಿಕೆ

ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:44 IST
Last Updated 24 ಫೆಬ್ರುವರಿ 2021, 3:44 IST
ಕೆ. ಆರ್ .ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದಾಗ ಪಕ್ಷದ ಮುಖಂಡರು ಅಭಿನಂದಿಸಿದರು
ಕೆ. ಆರ್ .ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದಾಗ ಪಕ್ಷದ ಮುಖಂಡರು ಅಭಿನಂದಿಸಿದರು   

ಕೆ.ಆರ್.ಪೇಟೆ: ‘ಮುಖಂಡರು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿ ಪಕ್ಷ ಸಂಘಟಿಸಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

ತಾಲ್ಲೂಕಿನ ಶೀಳನೆರೆ ಗ್ರಾಮದಲ್ಲಿ ಪಕ್ಷದ ಮುಖಂಡರೊಬ್ಬರ ಗೃಹಪ್ರವೇಶಕ್ಕೆ ಮಂಗಳವಾರ ಆಗಮಿಸಿದ್ದ ಅವರು, ಜಿಲ್ಲಾ ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಅವರ ಮನೆಯಲ್ಲಿ ಮಾತನಾಡಿ, ‘ಕಾರ್ಯಕರ್ತರೇ ಪಕ್ಷದ ಜೀವಾಳ. ಅವರಿಂದ ಪಕ್ಷ ಉಳಿದಿದೆ. ಆದ್ದರಿಂದ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸುವಂತೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ ಅವರು, ‘2023 ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಮಂಡ್ಯ ಜಿಲ್ಲೆ ಮತ್ತು ಕೆ.ಆರ್.ಪೇಟೆ ಪಕ್ಷದ ಭದ್ರಕೋಟೆಯಾಗಿದ್ದು ಮುಂದೆಯೂ ಇರಲಿದ್ದು, ಯುವಕರ ಮೂಲಕ ಪಕ್ಷ ಸಂಘಟಿಸುವುದಾಗಿ’ ಹೇಳಿದರು.

ADVERTISEMENT

‘ಮುಂಬರುವ ಚುನಾವಣೆಗಳಲ್ಲಿ ಪಕ್ಷ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲ. ತನ್ನ ಶಕ್ತಿಯ ಮೇಲೆ ಸ್ಪರ್ಧಿಸಲಿದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಮೈಸೂರು ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬೆಂಬಲ ಕೋರಿವೆ. ಪಕ್ಷಕ್ಕೆ ಹಿತವಾಗುವುದನ್ನು ಆಯ್ದು ಕೊಳ್ಳಲಾಗುವುದು ಎಂದಷ್ಟೇ’ ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಜಾನಕಿರಾಮು, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಟಿ. ಮಂಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಧನಂಜಯ, ಮುಖಂಡರಾರ ಆರ್. ಕುಮಾರಸ್ವಾಮಿ, ಕೆ.ಎನ್. ರಾಘವೇಂದ್ರ, ಸಿದ್ದೇಶ್, ಶಿವಲಿಂಗೇಗೌಡ, ಸೇರಿದಂತೆ ಪಕ್ಷದ ಹಲವು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.