ADVERTISEMENT

ಕೃಷಿ ವಿಜ್ಞಾನಿಗಳ ಸಂಶೋಧನೆ ರೈತನ ಮನೆ ಮುಟ್ಟಬೇಕು: ಕೇಂದ್ರ ಸಚಿವ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 3:24 IST
Last Updated 7 ಡಿಸೆಂಬರ್ 2025, 3:24 IST
<div class="paragraphs"><p>ಮಂಡ್ಯದ ವಿ.ಸಿ. ಫಾರಂನಲ್ಲಿ ಶನಿವಾರ ನಡೆದ ‘ಕೃಷಿ ಮೇಳ’ದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, </p></div>

ಮಂಡ್ಯದ ವಿ.ಸಿ. ಫಾರಂನಲ್ಲಿ ಶನಿವಾರ ನಡೆದ ‘ಕೃಷಿ ಮೇಳ’ದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು,

   

ಮಂಡ್ಯ: ‘ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಕಳೆದ ಒಂದು ವರ್ಷದಿಂದ ಕೈಗಾರಿಕೆ ಸ್ಥಾಪನೆಗೆ ಜಾಗ ಹುಡುಕಲು ಜಿಲ್ಲಾಧಿಕಾರಿಗೆ ಹೇಳುತ್ತಿದ್ದೇನೆ. ಇನ್ನೂ ಜಾಗ ಸಿಕ್ಕಿಲ್ಲ’ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ಇಲ್ಲಿನ ವಿ.ಸಿ. ಫಾರಂನಲ್ಲಿ 2ನೇ ದಿನವಾದ ಶನಿವಾರ ಕೃಷಿ ಮೇಳದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಕುಮಾರಣ್ಣ ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ. ಜಿಲ್ಲೆಗೆ ಏನಾದರೂ ಕೈಗಾರಿಕೆ ತರಬಹುದು ಎಂಬ ನಿರೀಕ್ಷೆ ಜನರಲ್ಲಿದೆ. ಕನಿಷ್ಠ ಒಂದು ಕಾರ್ಖಾನೆಯನ್ನಾದರೂ ಮಂಡ್ಯಕ್ಕೆ ತರಲು ಒಂದು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಇನ್ನೂ ಸರ್ಕಾರ ನಮಗೆ ಜಾಗ ನೀಡಿಲ್ಲ’ ಎಂದರು.

ADVERTISEMENT

‘ಕೇಂದ್ರ ಸರ್ಕಾರವು ಕೃಷಿ ವಲಯಕ್ಕೆ ₹1.32 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಿದೆ. ಮೆಕ್ಕೆಜೋಳ ಖರೀದಿಸುವಂತೆ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಖರೀದಿ ಕೇಂದ್ರ ತೆರೆದು ಎಂ.ಎಸ್‌.ಪಿ ದರದಲ್ಲಿ ರಾಜ್ಯ ಸರ್ಕಾರ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು. ಆಧುನಿಕ ಉಪಕರಣಗಳನ್ನು ರೈತರು ಬಳಸಿದರೆ ಶೇ 50ರಷ್ಟು ಹಣ ಉಳಿತಾಯ ಮಾಡಬಹುದು. ಕೃಷಿ ವಿಜ್ಞಾನಿಗಳ ಸಂಶೋಧನೆ ರೈತನ ಮನೆ ಮುಟ್ಟಬೇಕು’ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ರೈತರು ಕೃಷಿಯಲ್ಲಿ ವಿಜ್ಞಾನ ಮತ್ತು ನೂತನ ತಂತ್ರಜ್ಞಾನವನ್ನು ಬಳಸಿ ಕೃಷಿ ಬೇಸಾಯ ಮಾಡಬೇಕು. ಕೃಷಿಕರು ಶ್ರಮದಿಂದ ಕೆಲಸ ನಿರ್ವಹಿಸುವ ಬದಲು ಜಾಣ್ಮೆಯ ಕೌಶಲಗಳನ್ನು ಬೆಳೆಸಿಕೊಂಡು ಕೃಷಿಯನ್ನು ಮಾಡಿದರೆ ಕೃಷಿಯಿಂದ ಆದಾಯ ಗಳಿಸಬಹುದಾಗಿದೆ. ಸದರಿ ಕೃಷಿ ಮೇಳದ ಸದುಪಯೋಗವನ್ನು ಪಡೆಸಿಕೊಂಡು ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿ ಆದಾಯ ಗಳಿಸಬಹುದು’ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರು ‘ಹಸಿರು ಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ರೈತರಿಗೆ ಉಪಯುಕ್ತವಾಗುವ ತಾಂತ್ರಿಕ ಮಾಹಿತಿ ಒಳಗೊಂಡ ಹಸ್ತಪ್ರತಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಪ್ರಗತಿಪರ ರೈತರಿಗೆ ಗೌರವಿಸಲಾಯಿತು.

ಕೆ.ಆರ್.ಪೇಟೆ ಶಾಸಕ ಎಚ್.ಟಿ. ಮಂಜು, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಮಾಜಿ ಶಾಸಕರಾದ ಸುರೇಶ್ ಗೌಡ, ಜಿ.ಬಿ. ಶಿವಕುಮಾರ್, ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರಿಣಿಕುಮಾರ್, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪಾಲ್ಗೊಂಡಿದ್ದರು. 

ಕೃಷಿ ಮೇಳ: ಊಟದ ವೆಚ್ಚ ಭರಿಸಿದ ಎಚ್‌ಡಿಕೆ ಮಂಡ್ಯ: ಕೃಷಿ ಮೇಳದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ಮಕ್ಕಳಿಗೆ ಮೂರು ದಿನಗಳ ಕಾಲ ಊಟಕ್ಕೆ ಆಗುವ ವೆಚ್ಚವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭರಿಸಿದ್ದಾರೆ. ಮೇಳದಲ್ಲಿ ಭೋಜನಕ್ಕಾಗಿ ಜನರಿಂದ ಹಣ ಪಡೆದು ಊಟ ನೀಡುತ್ತಿದ್ದ ಸಂಘಟಕರು ಮಕ್ಕಳ ಊಟಕ್ಕೆ ₹20 ಹಿರಿಯರ ಊಟಕ್ಕೆ ₹30 ಚಾರ್ಜ್‌ ಮಾಡುತ್ತಿದ್ದರು. ಊಟಕ್ಕೆ ಹಣ ಪಡೆಯಬೇಡಿ. ಮೂರು ದಿನದ ಅಷ್ಟೂ ಊಟದ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರಲ್ಲದೆ ಸ್ಥಳದಲ್ಲಿಯೇ ಕೃಷಿ ಮೇಳ ಸಂಘಟಕರಿಗೆ ಹಣವನ್ನು ನೀಡಿದರು.

- ಮೈಷುಗರ್‌ ಶಾಲೆ ಶಿಕ್ಷಕರಿಗೆ ನೆರವು

ಮಂಡ್ಯ: ಸುಮಾರು ಹದಿನೈದು ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಲ್ಲಿನ ಮೈಷುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸಂಸದರ ವೇತನವನ್ನೇ ನೀಡಿದ್ದಾರೆ. ಈ ಮೊದಲು ನೀಡಿದ್ದ ಭರವಸೆಯಂತೆ ಶನಿವಾರ ಬೆಳಿಗ್ಗೆ ಶಾಲೆಗೆ ಭೇಟಿ ನೀಡಿದ ಸಚಿವರು  ₹1994200 ಮೊತ್ತದ ಚೆಕ್‌ ಅನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು. ‘ಮಕ್ಕಳ ಅನುಕೂಲಕ್ಕೆ ಎರಡು ಶಾಲಾ ಬಸ್ ಬೇಕು ಎಂದು ಮನವಿ ಮಾಡಿದ್ದಾರೆ. ಮೈಷುಗರ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುವರೆಗೆ ಉಚಿತ ಶಿಕ್ಷಣ ನೀಡಲು ಹೇಳಿದ್ದೇನೆ. ಈ ಬಗ್ಗೆ ಚುಂಚನಗಿರಿ ಶ್ರೀಗಳ ಬಳಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು. ‘ಕಾಂಗ್ರೆಸ್ ನಾಯಕರು ಶಾಲೆ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಮೈಷುಗರ್ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಪ್ರತಿಪಾದಿಸಿದರು.

‘ಸರ್ಕಾರ ನಡೆಸಲು ಅವಕಾಶ ಸಿಕ್ಕಿಲ್ಲ’

ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗೋದಾಮು ಶೀತಲೀಕರಣ ಘಟಕ ನಿರ್ಮಾಣವಾಗಬೇಕು. ರೈತ ಬೆಳೆದ ಬೆಳೆಗಳಿಗೆ ಶೇ 75 ಅಡ್ವಾನ್ಸ್ ಸರ್ಕಾರದಿಂದ ಕೊಡಬೇಕು. ಮಾರಾಟ ಮಾಡಿದ ಬಳಿಕ ರೈತ ಅಡ್ವಾನ್ಸ್ ಹಣ ಸರ್ಕಾರಕ್ಕೆ ಕಟ್ಟಬೇಕು. ಆಗ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಇದೆಲ್ಲಾ ನನ್ನ ಮುಂದಿರುವ ಕಾರ್ಯಕ್ರಮಗಳು. ಮುಂದಿನ ದಿನಗಳಲ್ಲಿ ನೀವೆಲ್ಲಾ ಬುದ್ಧಿವಂತರಾದರೆ ನಾನು ಜಾರಿ ಮಾಡಬಹುದು. ಮಂಡ್ಯದಂತಹ ಜಿಲ್ಲೆಗಳು ಸೇರಿ 36 ಸೀಟುಗಳನ್ನು ನೀಡಿದ್ದೀರಿ. ಯಾವತ್ತೂ ಪೂರ್ಣ ಪ್ರಮಾಣದ ಸರ್ಕಾರ ನಡೆಯಲು ಅವಕಾಶ ಸಿಕ್ಕಿಲ್ಲ’ ಎಂದು ಸಚಿವರು ಹೇಳಿದರು. ‘ನನ್ನ ಮೇಲೆ ಅನುಮಾನ ಬೇಡ ನಾನೆಲ್ಲೇ ಇದ್ದರೂ ನನ್ನ ಹೃದಯದಲ್ಲಿ ಮಂಡ್ಯಕ್ಕೆ ಮೊದಲ‌ ಸ್ಥಾನ. ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರನ್ನ ನವದೆಹಲಿಗೆ ಕರೆಸಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿಸಿದೆ. ಅವರ ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಿ ಕನಿಷ್ಟ ಪರಿಹಾರವಾದರೂ ಸಿಗಲಿದೆ’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.