ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿ.ಸಿ.ಫಾರಂನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದರು, ಇದರ ಭಾಗವಾಗಿ ಈ ಸ್ಥಳದಲ್ಲಿಯೇ ಕೃಷಿ ವಿವಿ ಸ್ಥಾಪಿಸಿದರೆ ಸಮಗ್ರ ಕೃಷಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಮನಗಂಡು ಮುಖ್ಯಮಂತ್ರಿ ಮತ್ತು ವಿರೋಧಪಕ್ಷದವರನ್ನು ಸೇರಿದಂತೆ ಎಲ್ಲರನ್ನು ಒಪ್ಪಿಸಿ ಸ್ಥಾಪಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ವಿ.ಸಿ. ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಪ್ರೇರಣೆಯಾಗಿದ್ದಾರೆ. ಇತಿಹಾಸದಲ್ಲೇ ಸರ್ಕಾರಿ ಕೃಷಿ ಕಾಲೇಜು ಹೊರತುಪಡಿಸಿ ಖಾಸಗಿಯಾಗಿ ಕೃಷಿ ಕಾಲೇಜಿಗೆ ಎಲ್ಲೂ ಒಪ್ಪಿಗೆ ನೀಡಿರಲಿಲ್ಲ. ಆದರೆ, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆದಿಚುಂಚನಗಿರಿಯಲ್ಲಿ ಕೃಷಿ ಕಾಲೇಜು ಆರಂಭಿಸಲು ಆಸಕ್ತಿ ತೋರಿದ್ದರಿಂದಾಗಿ ಪ್ರಥಮ ಬಾರಿಗೆ ಆದಿಚುಂಚನಗಿರಿಯಲ್ಲಿ ಖಾಸಗಿ ಕೃಷಿ ಕಾಲೇಜು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಅದೇ ರೀತಿ ಕನಕಪುರ ತಾಲ್ಲೂಕಿಗೂ ಒಪ್ಪಿಗೆ ನೀಡಲಾಗಿದೆ’ ಎಂದು ಹೇಳಿದರು.
‘ಮಂಡ್ಯ ಎಂದರೆ ಇಂಡಿಯಾ’ ಎನ್ನಲಾಗುತ್ತಿತ್ತು. ಅಂದಿನ ರಾಜಕಾರಣಿಗಳು ತೆಗೆದುಕೊಳ್ಳುತ್ತಿದ್ದ ತೀರ್ಮಾನ ಇಡೀ ರಾಜ್ಯಕ್ಕೆ ಅನ್ವಯವಾಗುತ್ತಿತ್ತು. ಆದರೆ, ನಮ್ಮ ಭಾಗದಲ್ಲಿ ನಾನು ಎಂಬ ಅಹಂ ಹೆಚ್ಚಾಗಿ ಅಭಿವೃದ್ಧಿಗಿಂತ ಕೇವಲ ರಾಜಕಾರಣವೇ ತುಂಬಿದೆ. ಇದರಿಂದಾಗಿ ಗತಕಾಲದ ವೈಭವ ಮರೆಯಾಗುತ್ತಿದೆ’ ಎಂದು ವಿಷಾದಿಸಿದರು.
‘ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆ ಅಲಂಕರಿಸಿರುವವರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚು. ಶೇ 70ರಷ್ಟು ಮಂದಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚು ಸಾಧನೆ ಮಾಡಿದ್ದಾರೆ. ಜಿಲ್ಲೆಯ ಜನ ನನಗೆ ಪ್ರೀತಿ ಹಾಗೂ ಶಕ್ತಿ ತುಂಬಿದ್ದಾರೆ. ಅವರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಇನ್ನೂ ಹತ್ತಾರು ವರ್ಷಗಳ ನಂತರ ಏನೆಲ್ಲ ಅನುಕೂಲವಾಗಲಿದೆ ಎನ್ನುವುದು ಗೊತ್ತಾಗಲಿದೆ. ಕೃಷಿ ವಿವಿ ದೊಡ್ಡ ಕಾಮಧೇನು ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಕಸ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೈತರ ಅಭ್ಯುದಯಕ್ಕಾಗಿ ಕೆ.ಆರ್.ಎಸ್.ಅಣೆಕಟ್ಟೆ ಕಟ್ಟಿಸಿ, ಹಲವು ಕಾರ್ಖಾನೆಗಳನ್ನು ಸ್ಥಾಪಿಸಿ ಸಿಹಿ ಬೆಳೆಯಲು ಕಾರಣರಾದರು. ಆದರೆ, ನಾವು ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಭೂಮಿಯ ಫಲವತ್ತತೆ ನಾಶ ಮಾಡುತ್ತಿದ್ದೇವೆ. ಅನ್ನ ಕೊಡುವ ತಾಕತ್ತು ಇರುವ ನಾವು ಆಹಾರದ ಜತೆಗೆ ವಿಷವನ್ನೂ ನೀಡುತ್ತಿದ್ದೇವೆ. ಇನ್ನಾದರೂ ಸಾವಯವ ಬೆಳೆ ಬೆಳೆಯುವ ವಿಧಾನ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮಾತನಾಡಿ, ‘ಸನ್ಮಾನ ಸ್ವೀಕರಿಸುವರಿಗೆ ಒಂದು ಹುರುಪು ಬರುತ್ತದೆ. ಇದು ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ. ಚಲುವರಾಯಸ್ವಾಮಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ, ಅವರ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನು ಹಾಡುತ್ತಿರುವುದನ್ನು ನೋಡಿದರೆ ಸಂತಸವಾಗುತ್ತದೆ. ನಾಲ್ವಡಿ ಅವರು ಕೇವಲ ಮಂಡ್ಯಕ್ಕಷ್ಟೇ ಸೀಮಿತವಾಗಿರಲಿಲ್ಲ, ಮೈಸೂರು ಮಹಾಸಂಸ್ಥಾನದಲ್ಲಿ ಉತ್ತಮ ಆಡಳಿತಗಾರರಾಗಿ ಕೆಲಸ ಮಾಡಿ ಜನಮನ್ನಣೆಳಿಸಿ ಹೆಸರು ವಾಸಿಯಾಗಿದ್ದಾರೆ ಎಂದು ತಿಳಿಸಿದರು.
ಶಾಸಕ ಅಶ್ವತ್ಥ ನಾರಾಯಣ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬೆಳ್ಳಿ ಕಿರೀಟ ಧಾರಣೆ ಮಾಡಿ ಅಭಿನಂದಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಟ್ರಸ್ಟ್‌ನ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮುಖಂಡರಾದ ಲಂಕೇಶ್ ಮಂಗಲ, ನಾಗರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.