ADVERTISEMENT

ಶ್ರೀರಂಗಪಟ್ಟಣ | ರಸ್ತೆ ಕಾಮಗಾರಿ ಅವೈಜ್ಞಾನಿಕ ಆರೋಪ: ಕಾಮಗಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 14:32 IST
Last Updated 22 ಮೇ 2025, 14:32 IST
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಮಾರಿಗುಡಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಕಾಮಗಾರಿಯನ್ನು ತಡೆದು ಪ್ರತಿಭಟಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಮಾರಿಗುಡಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಕಾಮಗಾರಿಯನ್ನು ತಡೆದು ಪ್ರತಿಭಟಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ಮಾರಿಗುಡಿ ಬೀದಿ ಇತರ ರಸ್ತೆಗಳ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಕಾಮಗಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಬಳಿಕ ರಸ್ತೆ ಅಭಿವೃದ್ಧಿ ಮಾಡಬೇಕು. ಅಲ್ಲಿಯವರೆಗೆ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಒಂದು ಹಂತದಲ್ಲಿ ಗುತ್ತಿಗೆದಾರರ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಸ್ಥಳಕ್ಕೆ ಬರಬೇಕು. ಚರಂಡಿ ನಿರ್ಮಿಸಿದ ಬಳಿಕ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡುವವರೆಗೆ ಕಾಮಗಾರಿ ನಡೆಸಕೂಡದು ಎಂದು ಮುಖಂಡರಾದ ನಾಗರಾಜು, ಕೃಷ್ಣಮೂರ್ತಿ ಇತರರು ಹೇಳಿದರು.

ದೊಡ್ಡಪಾಳ್ಯ ಗ್ರಾಮದ ವಿವಿಧೆಡೆ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. . ಇರುವ ಚರಂಡಿಗಳನ್ನು ಮುಚ್ಚಿ ಕಾಂಕ್ರೀಟ್‌ ಹಾಕುತ್ತಿದ್ದಾರೆ. ಚರಂಡಿ ನಿರ್ಮಿಸದೆ ಸಿಮೆಂಟ್ ರಸ್ತೆ ಮಾಡಿದರೆ ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ಹಾಗಾದರೆ ಓಡಾಡುವುದು ಹೇಗೆ ಎಂದು ಸಿದ್ದಪ್ಪ ಪ್ರಶ್ನಿಸಿದರು.

ADVERTISEMENT

‘ಗ್ರಾಮ ಪಂಚಾಯಿತಿಗೂ ಈಗ ನಡೆಯುತ್ತಿರುವ ಕಾಮಗಾರಿಗೂ ಸಂಬಂಧವಿಲ್ಲ. ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ದಿ ಮಾಡುತ್ತಿದೆ’ ಎಂದು ಮುಂಡುಗದೊರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶಾಲಮೂರ್ತಿ ಹೇಳಿದರು.

‘ದೊಡ್ಡಪಾಳ್ಯ ಗ್ರಾಮದಲ್ಲಿ, ₹50 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಮಾರ್ಗದಲ್ಲಿ ಒಳ ಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಗಳಿವೆ. ಸಮಸ್ಯೆ ಆಗದಂತೆ ಕಾಮಗಾರಿ ನಡೆಸುವ ಭರವಸೆ ನೀಡಿದ್ದೇವೆ. ಮತ್ತೆ ಕಾಮಗಾರಿ ಶುರುವಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಲು ಸ್ಥಳೀಯ ಗ್ರಾಮ ಪಂಚಾಯಿತಿಯ ಸಹಕಾರ ಅಗತ್ಯ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್‌ ಹೇಳಿದರು.

ನೇತ್ರ, ಅಟೆಂಡರ್‌ ನಾಗರಾಜು, ಗೌರಮ್ಮ, ಬಿಂದು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.