ADVERTISEMENT

ಮಂಡ್ಯ | ರಸ್ತೆಗೆ ಅಂಬೇಡ್ಕರ್‌ ನಾಮಫಲಕ: ಮನವಿ

ಪರ್ಯಾಯ ಹೆಸರು ನಾಮಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:52 IST
Last Updated 11 ಸೆಪ್ಟೆಂಬರ್ 2025, 6:52 IST
ಮಂಡ್ಯ ನಗರದ ನೂರಡಿ ರಸ್ತೆಗೆ ಅಂಬೇಡ್ಕರ್‌ ಹೆಸರಿನ ನಾಮಫಲಕ ಹಾಕಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು
ಮಂಡ್ಯ ನಗರದ ನೂರಡಿ ರಸ್ತೆಗೆ ಅಂಬೇಡ್ಕರ್‌ ಹೆಸರಿನ ನಾಮಫಲಕ ಹಾಕಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು   

ಮಂಡ್ಯ: ನಗರದ ನೂರಡಿ ರಸ್ತೆಗೆ ಅಂಬೇಡ್ಕರ್‌ ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಬಿಎಸ್‌ಪಿ, ಅಂಬೇಡ್ಕರ್ ವಾರಿಯರ್ಸ್‌, ವಿಶ್ವ ದಲಿತ ಮಹಾಸಭಾದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಬುಧವಾರ ಮನವಿ ನೀಡಿದರು.

ನಗರದ ಬೆಸಗರಹಳ್ಳಿ ರಾಮಣ್ಣ ವೃತದಿಂದ ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗಿನ ಜೋಡಿ ರಸ್ತೆಗೆ ಅಂಬೇಡ್ಕರ್‌ ಹೆಸರಿಡಲು ನಗರಸಭೆಯು 1976ರಲ್ಲಿ ನಿರ್ಣಯ ಮಾಡಿದೆ, ಅದರಂತೆ ರಸ್ತೆಗೆ ನಾಮಫಲಕ ಅಳವಡಿಸಬೇಕು. ಮೈಸೂರು ವಿಭಾಗಾಧಿಕಾರಿಗಳು ಮಂಡ್ಯ ನಗರದ ಯಾವುದಾದರೂ ರಸ್ತೆಗೆ ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು 1975 ರಲ್ಲಿ ಪತ್ರ ಬರೆದಿದ್ದರು ಎಂದರು.

ಅದರಂತೆ 1976 ಜೂನ್‌ 15 ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನೂರಡಿ ರಸ್ತೆಗೆ ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆ ಎಂದು ನಾಮಕರಣ ಮಾಡುವ ನಿರ್ಣಯ ಕೈಗೊಂಡು ರಸ್ತೆಯಲ್ಲಿ ಅಂಬೇಡ್ಕರ್ ರಸ್ತೆ ನಾಮಫಲಕ ದಾಖಲಾಗಿತ್ತು, ಇಲ್ಲಿನ ವರ್ತಕರು ಅಂಗಡಿ ನಾಮಫಲಕಗಳಲ್ಲಿ ಹಾಗೂ ಸ್ಥಳೀಯ ನಿವಾಸಿಗಳು ಸಹ ವಿಳಾಸದಲ್ಲಿ ಇದೇ ಹೆಸರನ್ನು ಬಳಕೆ ಮಾಡಿದ್ದಾರೆ ಎಂದು ವಿವರಿಸಿದರು.

ADVERTISEMENT

ನಗರಸಭೆಯ ಎಲ್ಲಾ ದಾಖಲಾತಿಗಳಲ್ಲೂ ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆ ಎಂದು ನಮೂದಿಸಲಾಗಿದೆ. ರಸ್ತೆಯು ನೂರು ಅಡಿ ಅಗಲ ಇದ್ದಿದ್ದರಿಂದ ಜನತೆ ನೂರಡಿ ರಸ್ತೆ ಎಂದು ಕರೆಯುತ್ತಿದ್ದರು, ಇದನ್ನೇ ತಪ್ಪಾಗಿ ಅರ್ಥೈಸಿ ಕೊಳ್ಳಲಾಗಿದೆ. ನಗರಸಭೆಯ ಅಧಿಕಾರಿಗಳು ಸದರಿ ರಸ್ತೆ ವಿಚಾರವಾಗಿ ಯಾವುದೇ ದಾಖಲಾತಿ ಪರಿಶೀಲನೆ ಮಾಡದೆ, ಸದಸ್ಯರು ಕೂಡ ಯಾವುದೇ ಮಾಹಿತಿ ತಿಳಿಯುವ ಗೋಜಿಗೆ ಹೋಗದೆ 2022 ಅಕ್ಟೋಬರ್‌ 28 ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪರ್ಯಾಯ ಹೆಸರು ನಾಮಕರಣ ಮಾಡಲು ನಿರ್ಣಯ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಅಂಬೇಡ್ಕರ್ ಜೋಡಿ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡಲು ನಗರಸಭೆ ಕೈಗೊಂಡಿರುವ ನಿರ್ಣಯ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಆಗಿದೆ. ಹಾಗಾಗಿ ನಗರಸಭೆಯು 1976ರ ನಿರ್ಣಯದಂತೆ ಕ್ರಮ ಕೈಗೊಂಡು ಇತ್ತೀಚಿನ ನಿರ್ಣಯ ರದ್ದು ಮಾಡಬೇಕು. ಮುಂದಿನ ದಿನಗಳಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಯ ಮುಖಂಡರಾದ ಗುರುಪ್ರಸಾದ್ ಕೆರಗೋಡು, ವೆಂಕಟಗಿರಿಯಯ್ಯ, ಎಂ.ವಿ.ಕೃಷ್ಣ, ವಿಜಯಲಕ್ಷ್ಮಿ ರಘುನಂದನ್, ಸೋಮಶೇಖರ್ ಕೆರಗೋಡು, ಶಿವಶಂಕರ್, ಎಸ್.ಡಿ.ಜಯರಾಮ್, ಎಂ.ಎಲ್.ತುಳಸೀದರ್, ಎಚ್.ಎನ್. ನರಸಿಂಹಮೂರ್ತಿ, ಎಚ್.ಜಿ.ಗಂಗರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.